ಬೆಂಗಳೂರು:
ತಮಿಳುನಾಡಿನ ಕೊಯಮ್ಮತ್ತೂರಿನಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರದೀಪ್ ಕುಮಾರ್ ಆಚಾರ್ಯ ಅವರು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
83ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರದೀಪ್ ಅವರು, ಸ್ಕ್ವಾಟ್ 300 ಕೆಜಿ, ಬೆಂಚ್‌ಪ್ರೆಸ್ 207.5 ಕೆಜಿ, ಹಾಗೂ ಡೆಡ್ ಲಿಫ್ಟ್‌ನಲ್ಲಿ 275 ಕೆಜಿ ಸೇರಿದಂತೆ ಒಟ್ಟು 787.5 ಕೆಜಿ ಭಾರವೆತ್ತಿ ಐತಿಹಾಸಿಕ ಚಿನ್ನ ಗೆದ್ದರು. 2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮತ್ತು 2019ರಲ್ಲಿ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಪ್ರದೀಪ್ ಆಚಾರ್ಯ ಅವರಿಗೆ ಏಷ್ಯಾ ಮಟ್ಟದಲ್ಲಿ ಇದು ಮೊದಲ ಚಿನ್ನದ ಪದಕವಾಗಿದೆ.
ಕೋಲ್ಕೊತಾದ ಅಂಶ್ ಸಿಂಗ್ ಬೆಳ್ಳಿ ಹಾಗೂ ಕಜಕೀಸ್ಥಾನದ ಕಾಪ್ಶೆ ಅಮನ್ ಕಂಚಿನ ಪದಕ ಗೆದ್ದಿದ್ದಾರೆ. ಮಂಗಳೂರಿನ ಬಾಲಾಂಜನೇಯ ಜಿಮ್ನೇಷಿಯಂನ ಸದಸ್ಯರಾಗಿರುವ ಪ್ರದೀಪ್ ಕುಮಾರ್ ಆಚಾರ್ಯ ಸತೀಶ್ ಕುಮಾರ್ ಕುದ್ರೋಳಿ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಪ್ರದೀಪ್ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿರುತ್ತಾರೆ.