ಚಿನ್ನ ಗೆದ್ದವರಿಗೆ ಅವಮಾನ, ಬೆಳ್ಳಿ ಗೆದ್ದವರಿಗೆ ಬಹುಮಾನ ಗ್ಯಾರೆಂಟಿ!
ಬೆಂಗಳೂರು: ಈ ರಾಜ್ಯದಲ್ಲಿ ಕ್ರೀಡಾ ಅವ್ಯವಸ್ಥೆ ಯಾವ ಹಂತ ತಲುಪಿದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ನಿದರ್ಶನವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದವರನ್ನು ಮರೆತು ಬೆಳ್ಳಿ ಗೆದ್ದವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಸನ್ಮಾನಿಸಿ, ನಗದು ಬಹುಮಾನ ಘೋಷಿಸಿರುವ ಘಟನೆ ಬೆಳಕಿಗೆ ಬಂದಿದೆ. Asian Junior Badminton Gold medalist neglected, silver medalist honored and awarded cash prize by Karnataka Chief Minister.
ಈ ದೇಶದ ಯೋಧ ಮಣಿಮುತ್ತು ಅವರ ಪುತ್ರಿ ಶೈನಾ ಮಣಿಮುತ್ತು ಏಷ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೇ ಟೂರ್ನಿಯಲ್ಲಿ ಲಕ್ಷ್ಯ ರಾಜೇಶ್ ಕೂಡ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದರು. ಇಬ್ಬರದ್ದೂ ವಿಭಿನ್ನ ವಯೋಮಿತಿ ವಿಭಾಗ. ಶೈನಾ ಮಣಿಮುತ್ತು ಅವರ ತಂದೆ ಪ್ರಭಾವಿ ವ್ಯಕ್ತಿಗಳಲ್ಲ. ಆದರೆ ಗೌರವದ, ಹೆಮ್ಮೆಯ ಯೋಧ. ಲಕ್ಷ್ಯ ರಾಜೇಶ್ ಅವರ ತಂದೆ ರಾಜೇಶ್ ಅವರು ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ. ಲಕ್ಷ್ಯ ಅವರಿಗೆ ತರಬೇತಿ ನೀಡುತ್ತಿರುವುದು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕೋಚ್. ಇದೆಲ್ಲದುದರ ಪರಿಣಾಮ ಲಕ್ಷ್ಯ ರಾಜೇಶ್ ಅವರನ್ನು ಸನ್ಮಾನಿಸಲು ಸಾಧ್ಯವಾಯಿತು. ಅದೇ ರೀತಿ ಚಿನ್ನ ಗೆದ್ದವರನ್ನು ಮರೆಯಲು ನಿದರ್ಶನವಾಯಿತು.

15 ವರ್ಷ ಪ್ರಾಯದ ಶೈನ್ ಈ ದೇಶದ ಅತ್ಯಂತ ಭರವಸೆಯ ಆಟಗಾರ್ತಿ. ಇತ್ತೀಚಿಗೆ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ 19 ವರ್ಷದ ವಯೋಮಿತಿಯ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದು ದಾಖಲೆ ಬರೆದ ಆಟಗಾರ್ತಿ. ಇಂಥ ಪ್ರತಿಭೆಯನ್ನು ಗುರುತಿಸುವುದನ್ನು ಬಿಟ್ಟು ಪ್ರಭಾವಕ್ಕೆ ಮಣಿದ ಮುಖ್ಯಮಂತ್ರಿಗಳು ಕ್ರೀಡಾ ಇಲಾಖೆಯ ಆಯಕ್ತರ ಸಮ್ಮುಖದಲ್ಲಿಯೇ ಬೆಳ್ಳಿ ಗೆದ್ದವರನ್ನು ಗೌರವಿಸಿರುವುದು ಈ ರಾಜ್ಯದ ಕ್ರೀಡೆಗೆ ಮಾಡಿದ ಅವಮಾನ,
ಮುಖ್ಯಮಂತ್ರಿಗಳ ಹಾದಿ ತಪ್ಪುಸುತ್ತಿರುವುದ ಯಾರು?: ರಾಜ್ಯದ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯಮಂತ್ರಿಗಳಿಗೆ ಎಲ್ಲ ವಿಷಯಗಳ ಬಗ್ಗೆ ಗಮನ ಹರಿಸಲು ಆಗುವುದಿಲ್ಲ, ನಿಜ, ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಸರಿಯಾದ ಮಾಹಿತಿಯನ್ನು ನೀಡಬೇಕು. ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಿಗೂ ಇದರ ಬಗ್ಗೆ ಅರಿವಿಲ್ಲ ಎಂದರೆ ನಾಚಿಕೆಯಾಗಬೇಕು. ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕಮಿಷಿನರ್ ಹಾಗೂ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಇಂಥ ಕಾರ್ಯಕ್ರಮಗಳು ನಡೆಯವುದು ಕ್ರೀಡಾ ಸ್ಫೂರ್ತಿಗೆ ವಿರೋಧವಾದುದು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ: ಬೆಳ್ಳಿ ಗೆದ್ದ ತನ್ನ ಮಗಳನ್ನು ಗೌರವಿಸುವಾಗ ಚಿನ್ನ ಗೆದ್ದ ನಮ್ಮ ರಾಜ್ಯದ ಬ್ಯಾಡ್ಮಿಂಟನ್ ತಾರೆಯ ಬಗ್ಗೆ ಜಾಣ ಕುರುಡು ತೋರಿದ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿಯ ಜವಾಬ್ದಾರಿಯನ್ನು ಪ್ರಶ್ನಿಸುವಂಥದ್ದು. ತನ್ನ ಮಗಳಂತೆಯೇ ಇನ್ನೊಬ್ಬರ ಮಗಳು ಸಾಧನೆ ಮಾಡಿದ್ದಾಳೆ, ಅವಳನ್ನೂ ಗೌರವಿಸಬೇಕು ಎಂಬ ಸಾಮಾನ್ಯ ಅರಿವು ಇಲ್ಲದೆ, ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸಿಕೊಳ್ಳುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದುದು.

ನನ್ನನ್ನು ಕರೆಯಲೇ ಇಲ್ಲ: ಈ ಕರಿತು ಸ್ಪೋರ್ಸ್ಟ್ ಮೇಲ್ ಜೊತೆ ಮಾತನಾಡಿದ ಶೈನಾ ಮಣಿಮುತ್ತು, “ನನ್ನನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆದಿಲ್ಲ, ಈ ವಿಷಯ ನನಗೆ ಗೊತ್ತಿಲ್ಲ, ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿರುವುದು ನಿಜ, ಇತ್ತೀಚಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿರುವೆ,” ಎಂದರು.

