Sunday, July 21, 2024

ಏಷ್ಯನ್ ಗೇಮ್ಸ್‌ನಲ್ಲಿ ಸಹೋದರರ ಸವಾಲ್

ಸೋಮಶೇಖರ್ ಪಡುಕರೆ:

ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಈಜಿನಲ್ಲಿ ಕರ್ನಾಟಕದ ಸೋಹದರರು ಸ್ಪರ್ಧಿಸುತ್ತಿರುವುದು ವಿಶೇಷ. ಅರವಿಂದ್ ಮಣಿ ಹಾಗೂ ಅವಿನಾಶ್ ಮಣಿ  ಈ ಐತಿಹಾಸಿಕ ಸಾಧನೆಗೆ ಮುಂದಾಗಿದ್ದಾರೆ. ಅರವಿಂದ್ ಮಣಿ ಮೆಡ್ಲೇ ರಿಲೇಯಲ್ಲಿ  ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಅವಿನಾಶ್ ಫ್ರೀ ಸ್ಟೈಲ್  ರಿಲೇ ಹಾಗೂ ಬಟರ್‌ ಫ್ಲೈ  ೧೦೦ ಮೀ. ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಎ.ಮಣಿ ಹಾಗೂ ಕಲ್ಪನಾ  ಅವರ ಮುದ್ದಿನ ಮಕ್ಕಳಾದ ಈ ಸಹೋದರರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಹಂಬಲ.
ಅರವಿಂದ್ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರ್ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ತಮ್ಮ ಅವಿನಾಶ್ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದಾರೆ. ಅರವಿಂದ್ ಐದನೇ ವಯಸ್ಸಿನಲ್ಲಿ ಈಜು ಆರಂಭಿಸಿದರೆ, ಅವಿನಾಶ್ 9ನೇ ವಯಸ್ಸಿನಲ್ಲಿ ಈಜುಕೊಳಕ್ಕಿಳಿದರು. ಅರವಿಂದ್ 11ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದು ಇತಿಹಾಸ ಬರೆದರು.
560 ಪದಕಗಳು!
ಅರವಿಂದ್ ಹಾಗೂ ಅವಿನಾಶ್ ಇದುವರೆಗೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಚ್ಚು560 ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಅಣ್ಣ 340 ಹಾಗೂ ತಮ್ಮ 220 ಪದಕಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ 250 ಪದಕ ಚಿನ್ನವಾಗಿರುತ್ತದೆ.
ಮೂವರು ಸಹೋದರರು ಈಜುಗಾರರು
ಅರವಿಂದ್, ಅವಿನಾಶ್ ಅವರೊಂದಿಗೆ ಕಿರಿಯ ತಮ್ಮ ಆಕಾಶ್ ಮಣಿ ಕೂಡ ಈಜಿನಲ್ಲಿ ಚಾಂಪಿಯನ್. ಬೆಂಗಳೂರಿನ ಸೇಂಟ್ ಜೋಸೆಫ್  ಶಾಲೆಯಲ್ಲಿ ಓದುತ್ತಿರುವ ಆಕಾಶ್‌ಮಣಿ ಇದುವರೆಗೂ 16 ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರೀಯ ಕಿರಿಯರ ಚಾಂಪಿಯನ್‌ಷಿಪ್‌ನ ಬ್ಯಾಕ್‌ಸ್ಟ್ರೋಕ್‌ವಿ‘ಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವಾಸೆ
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿರುವ ಅರವಿಂದ್ ಮಣಿ ಮಾತನಾಡಿ, ‘ಈಜಿನಲ್ಲಿ ಇದುವರೆಗೂ ಮಾಡಿರುವ ಸಾಧನೆ ತೃಪ್ತಿ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸ್ಪರ್ಧೆ  ಮಾಡಬೇಕಾಗಿದೆ. ಮನೆಯಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಗುರುಗಳಿಂದಲೂ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆದ್ದರಿಂದ ೨೦೨೦ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದೇವೆ.  ಏಷ್ಯನ್ ಗೇಮ್ಸ್‌ನಲ್ಲಿ ರಿಲೇಯಲ್ಲಿ  ಪದಕ ಗೆಲ್ಲುವ ಸಾಧ್ಯತೆ ಇದೆ. ಅದಕ್ಕಾಗಿ ಕಠಿಣ ಅಭ್ಯಾಸವನ್ನು ಮುಂದುವರಿಸಿದ್ದೇವೆ,’’  ಎಂದರು.

Related Articles