Sunday, September 8, 2024

ಜಾನ್ಸನ್‌ಗೆ ಚಿನ್ನ, ರಿಲೇಯಲ್ಲಿ ಬಂಗಾರ, ಹಾಕಿಯಲ್ಲಿ ಶಾಕ್

ಏಜೆನ್ಸೀಸ್ ಜಕಾರ್ತ

೧೮ನೇ ಏಷ್ಯನ್ ಕ್ರೀಡಾಕೂಟದ ೧೨ನೇ ದಿನದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾ‘ನೆ ತೋರಿದ್ದಾರೆ. ಅಥ್ಲೀಟ್‌ಗಳು ಚಿನ್ನ ಗೆದ್ದರೆ, ಪುರುಷರ ಹಾಕಿಯಲ್ಲಿ ಭಾರತ ಫೈನಲ್ ತಲಪುವಲ್ಲಿ ವಿಫಲವಾಯಿತು.

೧೫೦೦ ಮೀ. ಓಟದಲ್ಲಿ ಭಾರತ ಮೊದಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಜಿನ್ಸನ್ ಜಾನ್ಸನ್ ೩ ನಿಮಿಷ ೪೪.೭೨ ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಮನ್‌ಜೀತ್ ಸಿಂಗ್ ಬೆಳ್ಳಿಗೆ ತೃಪ್ತಿಪಟ್ಟರು. ಸೀಮಾ ಪೂನಿಯಾ ಡಿಸ್ಕಸ್ ಎಸೆತದಲ್ಲಿ ೬೨.೨೬ ಮೀ. ದೂರಕ್ಕೆ ಎಸೆದು ಕಂಚಿನ ಪದಕ ಗೆದ್ದರು. ವನಿತೆಯರ ೧೫೦೦ ಮೀ. ಓಟದಲ್ಲಿ ಪಿ.ಯು. ಚಿತ್ರಾ ೪ ನಿಮಿಷ ೧೨.೫೦ ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಕರ್ನಾಟಕಕ್ಕೆ ಚಿನ್ನ

ಭಾರತ ವನಿತೆಯರ ರಿಲೇ ತಂಡ ಚಿನ್ನ ಗೆಲ್ಲುವುದರೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ಹಿಮಾ ದಾಸ್, ಸರಿತಾಬೆನ್ ಗಾಯಕ್ವಾಡ್, ವಿ.ಕೆ. ವಿಸ್ಮಯ ಹಾಗೂ ಕರ್ನಾಟಕದ ಎಂ.ಆರ್. ಪೂವಮ್ಮ ತಂಡದಲ್ಲಿದ್ದಾರೆ. ೩ ನಿಮಿಷ ೨೮.೭೨ ಸೆಕೆಂಡುಗಳಲ್ಲಿ ಮಹಿಳಾ ತಂಡ ಗುರಿ ತಲುಪಿ ದೇಶಕ್ಕೆ ೧೩ನೇ ಚಿನ್ನ ತಂದುಕೊಟ್ಟಿತು.

ರಾಜ್ಯ ಕ್ರೀಡಾ ಸಚಿವರ ಅಭಿನಂದನೆ

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರು ಭಾರತ ಮಹಿಳಾ ತಂಡದಲ್ಲಿದ್ದ ಕರ್ನಾಟಕದ ಎಂ.ಆರ್. ಪೂವಮ್ಮ ಅವರಿಗೆ ರಾಜ್ಯ ಯುವಜನ ಸೇವಾ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಹಿಮಾ ದಾಸ್ ಅವರಿಗೆ ೧೦ ಲಕ್ಷ ರೂ. ಬಹುಮಾನ ಘೋಷಿಸಿರುವ ಸಚಿವರು ನಮ್ಮವರೇ ಆದ ಎಂ.ಆರ್. ಪೂವಮ್ಮಗೆ ಎಷ್ಟು ಬಹುಮಾನ ಘೋಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಧಾರುಣ್‌ಗೆ ಮತ್ತೊಂದು ಬೆಳ್ಳಿ

ಪುರುಷರ ರಿಲೇ ತಂಡ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಆಳ್ವಾಸ್‌ನ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ಅವರಿಗೆ ಎರಡನೇ ಬೆಳ್ಳಿ ಪದಕ ದಕ್ಕಿದೆ. ಮೊಹಮ್ಮದ್ ಕುಹ್ನು, ಧಾರುಣ್ ಅಯ್ಯಸ್ವಾಮಿ, ಮೊಹಮ್ಮದ್ ಅನಾಸ್ ಹಾಗೂ ರಾಜೀವ್ ಅರೋಕಿಯಾ ಅವರನ್ನೊಳಗೊಂಡ ತಂಡ  ೩ ನಿಮಿಷ ೧.೮೫ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದಿದೆ.

ಹಾಕಿಯಲ್ಲಿ ಶಾಕ್ 

ಮಲೇಷ್ಯಾ ವಿರುದ್ಧದ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಶೂಟೌಟ್‌ನಲ್ಲಿ ೬-೭ ಗೋಲುಗಳ ಅಂತರದಲ್ಲಿ ಸೋಲುಂಡು ಆಘಾತ ಅನುಭವಿಸಿದೆ. ಈಗ ಭಾರತ ತಂಡ ಕಂಚಿಗಾಗಿ ಹೋರಾಟ ನಡೆಸಬೇಕಾಗಿದೆ. ನಿಗದಿತ ಅವಧಿಯಲ್ಲಿ ಹಾಲಿ ಚಾಂಪಿಯನ್ ಭಾರತ ಹಾಗೂ ಮಲೇಷ್ಯಾ ತಂಡಗಳು ೨-೨ ಗೋಲುಗಳಿಂದ ಸಮಬಲ ಸಾಧಿಸಿದವು. ಶೂಟೌಟ್‌ನ ಕೊನೆಯಲ್ಲಿ ಮಲೇಷ್ಯಾ ೧ ಗೋಲಿನಿಂದ ಮುನ್ನಡೆ ಕಂಡು ಭಾರತಕ್ಕೆ ಆಘಾತ ನೀಡಿತು.
೧೨ನೇ ದಿನದ ರಾತ್ರಿ ೮ ಗಂಟೆಯ ಹೊತ್ತಿಗೆ ‘ಾರತ ೧೩ ಚಿನ್ನ, ೨೧ ಬೆಳ್ಳಿ ಹಾಗೂ ೫೯ ಕಂಚಿನ ಪದಕಗಳೊಂದಿಗೆ ಒಟ್ಟು ೫೯ ಪದಕ ಗೆದ್ದು ಪದಕ ಪಟ್ಟಿಯಲ್ಲಿ  ೮ನೇ ಸ್ಥಾನದಲ್ಲಿದೆ.

Related Articles