473 ದಿನ 47300 ಕಿ.ಮೀ.: ಸಾಗಿದೆ ಫಿಟ್ನೆಸ್ ಗುರು ಅನಿಲ್ ಸಾಹಸ
ಸೋಮಶೇಖರ್ ಪಡುಕರೆ, Sportsmail
ತಾವು ಫಿಟ್ ಆಗಿರದೆ ಬೇರೆಯವರಿಗೆ ಫಿಟ್ನೆಸ್ ಹೇಳಿಕೊಡುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ಫಿಟ್ನೆಸ್ಸನ್ನೇ ಬದುಕಾಗಿಸಿಕೊಂಡಿರುವ ಫಿಟ್ನೆಸ್ ಗುರು ಅನಿಲ್ ಕಡ್ಸುರು ಕಳೆದ 473 ದಿನಗಳಿಂದ ಪ್ರತಿ ದಿನ 100 ಕಿ.ಮೀ. ನಂತೆ ಇಂದಿಗೆ 47300 ಕಿ.ಮೀ. ಸೈಕ್ಲಿಂಗ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಅನಿಲ್ ಬೆಂಗಳೂರಿನಲ್ಲಿ ಆರಂಭಿಸಿದ ಈ ಸಾಹಸ ಯಾತ್ರೆ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.ಕಳೆದ ವರ್ಷ ಆಗಸ್ಟ್ 2ರಂದು ಆರಂಭಗೊಂಡ ಅನಿಲ್ ಅವರ ಸಾಧನೆಯನ್ನು 365 ದಿನಗಳು ಪೂರ್ತಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರೆದು, ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫಿಕ್ಸಿ ಸೈಕಲ್‌ನಲ್ಲಿ ಈ ಸಾಧನೆ ಮಾಡುತ್ತಿರುವ ಅನಿಲ್ ಕಡ್ಸುರು ತಾವು ಯಾವುದೇ ದಾಖಲೆ ಮಾಡಲು ಹೊರಟಿದ್ದಲ್ಲ. ಬದಲಾಗಿ ಫಿಟೆಸ್ ಕಾಯ್ದುಕೊಳ್ಳುವ ಸಲುವಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ. ದಿನವೂ ಬೆಳಿಗ್ಗೆ 2;30ಕ್ಕೆ ಆರಂಭಗೊಳ್ಳುವ ಈ ಸೈಕಲ್ ಯಾತ್ರೆಗೆ ಅನಿಲ್ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರಿನ ಹೊರವಲಯದಲ್ಲಿರುವ ಕನಕಪುರ ರಸ್ತೆ.
ಶಿವಮೊಗ್ಗದ ಜಿಲ್ಲೆಯ ಸಾಗರ ತಾಲೂಕಿನವರಾದ ಅನಿಲ್ ಬಿಕಾಂ ಪದವೀಧರರು. ಮೊದಲು ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡಿ ಈಗ ತಮ್ಮದೇ ಆದರೆ ಫಿಟ್ನೆಸ್ ಕೇಂದ್ರವನ್ನು ಮಾಡಿಕೊಂಡಿದ್ದಾರೆ. ಹಲವಾರು ಸೈಕ್ಲಿಸ್ಟ್‌ಗಳಿಗೆ ಫಿಟ್ನೆಸ್‌ನಲ್ಲಿ ನೆರವಾಗುತ್ತಿದ್ದಾರೆ.
“ನಾನು ಯಾವುದೇ ಸಾಧನೆ ಮಾಡಬೇಕು ಅಥವಾ ಬೇರೆಯವರು ನನ್ನನ್ನು ಗುರುತಿಸಬೇಕೆಂದು ದಿನವೂ ಸೈಕ್ಲಿಂಗ್ ಆರಂಭಿಸಿದ್ದಲ್ಲ. ಅದಕ್ಕಾಗಿಯೇ ನನ್ನ ಸೈಕ್ಲಿಂಗ್ ಆರಂಭಗೊಳ್ಳುವುದೇ ರಾತ್ರಿ 2:30ಕ್ಕೆ. ಸೈಕ್ಲಿಂಗ್ ತಜ್ಞ ಮೋಹನ್ ಸುಬ್ರಹ್ಮಣ್ಯ ಅವರಿಂದ ಸ್ಫೂರ್ತಿ ಪಡೆದು ದಿನವೂ ನೂರು ಕಿ.ಮೀ. ದೂರವನ್ನು ಕ್ರಮಿಸುತ್ತೇನೆ. ಇದು ನನಗೆ ಖುಷಿಕೊಟ್ಟಿದೆ. ಇದುವರೆಗೂ ನಾನು ಬೈಕ್ ಅಥವಾ ಕಾರನ್ನು ಬಳಸಿಲ್ಲ. ಬದುಕಿನಲ್ಲಿ ಸಮಬ ಬಹಳ ಮುಖ್ಯವಾದುದು. ಅಲ್ಲಿಲ್ಲಿ ಸಮಯ ಹಾಳು ಮಾಡುವ ಕೆಲಸಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಸೈಕ್ಲಿಂಗ್‌ನಲ್ಲಿ ತೊಡಗಿಕೊಂಡರೆ ಕನಿಷ್ಠ ಆರೋಗ್ಯವಾದರೂ ಉತ್ತಮವಾಗಿರುತ್ತದೆ. ಇದಕ್ಕೆ ಸಮರ್ಪಕ ಗುರಿ, ಏಕಾಗ್ರತೆ ಮುಖ್ಯ,” ಎಂದು ಅನಿಲ್ ಹೇಳುತ್ತಾರೆ.
ಫಿಕ್ಸಿ ಸೈಕಲ್ ವಿಶೇಷತೆ:
ಅನಿಲ್ ಅವರು ತಮ್ಮ ಸಾಧನೆಗೆ ಬಳಸುತ್ತಿರುವುದು ಫಿಕ್ಸಿ ಸೈಕಲ್. ಇದಕ್ಕೆ ಗೇರ್ ಇರುವುದಿಲ್ಲ. ಹಿಂದುಗಡೆ ಬ್ರೇಕ್ ಇರುವುದಿಲ್ಲ. ಮುಂದಿನ ಟಯರ್‌ಗೆ ಬ್ರೇಕ್ ಇರುತ್ತದೆ. ಈ ಸೈಕಲ್‌ಗೆ ನಿರಂತರ ಪೆಡಲ್ ಮಾಡುತ್ತಿರಬೇಕು. ಏರು ಏರುತ್ತಿರಲಿ, ಅಥವಾ ಇಳಿಜಾರಿನಲ್ಲಿ ಸಾಗುತ್ತಿರಲಿ ಪೆಡಲ್ ಮಾಡುವುದು ಕಡ್ಡಾಯ. ಪೆಡಲ್ ಮಾಡದಿದ್ದರೆ ಇಳಿಜಾರಿನಲ್ಲೂ ನಿಂತುಬಿಡುತ್ತದೆ. ಬೆಂಗಳೂರಿನ ಸೈಕಲ್ ತಜ್ಞ ವೆಂಕಟೇಶ್ ಶಿವರಾಮ್ ಈ ಸೈಕಲ್ ತರಿಸಿಕೊಟ್ಟಿರುತ್ತಾರೆ. ನ್ಯೂಯಾರ್ಕ್ ನಗರದಲ್ಲಿ ಸೈಕಲ್ ಮೆಸೆಂಜರ್ಸ್ ಬಳಸುತ್ತಿದ್ದ ಈ ಸೈಕಲ್ ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಎಂದು ಅನಿಲ್ ತಾವು ಬಳಸುತ್ತಿರುವ ವಿಶೇ಼ಷ ಸೈಕಲ್ ಬಗ್ಗೆ ಮಾಹಿತಿ ನೀಡಿದರು.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಶುಭಕೋರುವ ಸಲುವಾಗಿ ದೇಶಾದ್ಯಂತ ಒಲಿಂಪಿಕ್ಸ್ ರೈಡ್ ಆಯೋಜಿಸಲಾಗಿತ್ತು. ಅದು ಆಗಸ್ಟ್ 1. ಅದೇ ದಿನ ಅನಿಲ್ ಅವರ ಸೈಕ್ಲಿಂಗ್ ಸಾಧನೆಗೆ ಒಂದು ವರ್ಷದ ಸಂಭ್ರಮ. ಆಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅನಿಲ್ ಅವರ ಸಾಧನೆಯ ಗುಣಗಾನ ಮಾಡಿದ್ದಾರೆ.
42 ವರ್ಷದ ಅನಿಲ್ ಅವರ ಸಾಧನೆಯ ಹಾದಿಯಲ್ಲಿ ಪತ್ನಿ ಸಿಂಧೂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ. ಮಗಳು ಚಿನ್ಮಯಿ ತಂದೆಯ ಸಾಧನೆ ನೋಡಿ ಖುಷಿಪಡುತ್ತಿದ್ದಾಳೆ. ಅನಿಲ್ ಅವರ ಕುರಿತ ಲೇಖನಕ್ಕೆ ಪೂರ್ಣವಿರಾಮ ನೀಡಬೇಕಾಗುತ್ತದೆ, ಆದರೆ ಅವರ ಸೈಕ್ಲಿಂಗ್ ಯಾತ್ರೆ ಸಾಗುತ್ತಲೇ ಇರುತ್ತದೆ. “ನನಗೆ ಶಕ್ತಿ ಇರುವ ತನಕ ಪೆಡಲ್ ಮಾಡುತ್ತಲೇ ಇರುತ್ತೇನೆ…” ಎಂದು ಅನಿಲ್ ಖುಷಿಯಿಂದಲೇ ಹೇಳುತ್ತಾರೆ.