Friday, February 23, 2024

ಅಥ್ಲೆಟಿಕ್ಸ್‌ ಅಂಗಣದಲ್ಲೊಬ್ಬ ನಿಸ್ವಾರ್ಥ ನಿದರ್ಶನ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಓದಿದ್ದು ಆನಿಮೇಷನ್‌, ಕೆಲಸ ಮಾಡುತ್ತಿರುವುದು ಸ್ವೀಟ್‌ ಸೇಲ್ಸ್‌, ಸಮಯ ಸಿಕ್ಕಾಗಲೆಲ್ಲ ಅಥ್ಲೆಟಿಕ್ಸ್‌ ಅಂಗಣದಲ್ಲಿ ಓಟ, ಕ್ರೀಡಾಕೂಟಕ್ಕೆ ನೆರವು, ಟೆಕ್ನಿಕಲ್‌ ವಿಭಾಗದಲ್ಲೂ ಸೇವೆ, ಮಾಧ್ಯಮಗಳಿಗೆ ಫಲಿತಾಂಶ ನೀಡುವಲ್ಲಿಯೂ ನೆರವು, ದೇಶದ ಯಾವುದೇ ಭಾಗದಲ್ಲಿಯೇ ಅಥ್ಲೆಟಿಕ್ಸ್‌ ಕೂಟ ನಡೆದರೆ ಅಲ್ಲಿಯ ಮಾಹಿತಿಗಳನ್ನು ಸಂಗ್ರಹಿಸುವುದು, ಫಲಿತಾಂಶಗಳನ್ನು ಅಪ್‌ಲೋಡ್‌ ಮಾಡುವುದು, ಜೊತೆಯಲ್ಲಿ ಅಥ್ಲೆಟಿಕ್ಸ್‌ ಕೋಚಿಂಗ್‌, ಎನ್‌ಐಎಸ್‌ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನಿಂದ ಲೆವೆಲ್‌ 1 ಕೋರ್ಸ್‌ ಹೀಗೆ ಅಥ್ಲೆಟಿಕ್ಸ್‌ ಅಂಗಣದಲ್ಲಿ ನಿಸ್ವಾರ್ಥ ಸೇವೆ ಮಾಡುವ ನಿದರ್ಶನ್‌ ಕೆ. ಇ. ಅವರು ನಿಜವಾಗಿಯೂ ಕ್ರೀಡಾಸ್ಫೂರ್ತಿಗೊಂದು ನಿದರ್ಶನ.

ಮೊದಲೆಲ್ಲ ಕ್ರೀಡಾಕೂಟ ನಡೆದು ಸಂಜೆಯಾದರೆ ಫಲಿತಾಂಶ ಸಿಗುತ್ತಿತ್ತು, ಆದರೆ ಈಗ ಸ್ಪರ್ಧೆ ನಡೆದ ಸ್ವಲ್ಪ ಹೊತ್ತಿನಲ್ಲೇ ಫಲಿತಾಂಶ ಪ್ರತ್ಯಕ್ಷ, ನಾಳೆ ನಡೆಯುವ ಸ್ಪರ್ಧೆಗಳ ಬಗ್ಗೆಯೂ ವಿವರವಾದ ಮಾಹಿತಿ, ಅಥ್ಲೆಟಿಕ್ಸ್‌ ಸಂಸ್ಥೆಯಲ್ಲಿ ಈ ನಿಸ್ವಾರ್ಥ ಸೇವೆ ಮಾಡುತ್ತಿರುವರು ಯಾರು ಎಂದು ಹುಡುಕಿದಾಗ 25ರ ಹರೆಯದ ಯುವಕ ನಿದರ್ಶನ ಅವರ ಪರಿಚಯವಾಯಿತು.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡರೂ ನಿದರ್ಶನ ಅವರಿಗೆ ಇನ್ನೂ ನಿರೀಕ್ಷಿತ ಮಟ್ಟದ ಸಾಧನೆ ಮಾಡಲಾಗಲಿಲ್ಲ. ಸೇಲ್ಸ್‌ ಕೆಲಸ ಮಾಡಿಕೊಂಡು ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಏನೇಯಾದರೂ ಸ್ಪರ್ಧೆಯಿಂದ ಹಿಂದೆ ಸರಿಯದೆ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡು ನಾಲ್ಕು, ಐದನೇ ಸ್ಥಾನ ಗಳಿಸುತ್ತಿದ್ದಾರೆ. ಮಾವನವರ ಸ್ಟೀಟ್ಸ್‌ ಉದ್ದಿಮೆಯಲ್ಲಿ ತೊಡಗಿ ಹೊಟೇಲ್‌ಗಳಿಗೆ ಸೇಲ್ಸ್‌ ಕೆಲಸ ಮಾಡುತ್ತಿರುವ ನಿದರ್ಶನ್‌ ಅವರ ಕ್ರೀಡಾ ಆಸಕ್ತಿಯನ್ನು ಕಂಡಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.

“ಮುಂದಿನ ತಿಂಗಳು ನ್ಯಾಷನಲ್‌ ಓಪನ್‌ ಅಥ್ಲೆಟಿಕ್ಸ್‌ ಇದೆ, ಅದಕ್ಕಾಗಿ ವೆಬ್‌ಸೈಟ್‌ ಸರಿ ಮಾಡುತ್ತಿದ್ದೇನೆ,” ಎಂದು ಮಾತಿಗಿಳಿದ ನಿದರ್ಶನ್‌ ಅವರದ್ದು ಬಿಡುವಿಲ್ಲದ ಬದುಕು. ಒಂದು ಕ್ರೀಡಾಕೂಟ ನಡೆಯಿತೆಂದರೆ ಕ್ರೀಡಾಪಟುಗಳ ಪ್ರವೇಶಾತಿಯನ್ನು ಸಂಗ್ರಹಿಸುವುದು, ಚೆಸ್‌ ನಂಬರ್‌ ನೀಡುವುದು, ವಯಸ್ಸು ದೃಢೀಕರಣ, ಫಲಿತಾಂಶ ಸಂಗ್ರಹಿಸುವುದು, ರಿಸಲ್ಟ್‌ ಅಪ್‌ಲೋಡ್‌ ಮಾಡುವುದು, ಪತ್ರಿಕೆಗಳಿಗೆ ಫಲಿತಾಂಶ ಕಳುಹಿಸುವುದು ಹೀಗೆ ಕ್ರೀಡಾಕೂಟಕ್ಕೆ ಸಂಬಂಧಿಸಿದ ಅನೇಕ ಕೆಲಸಗಳಲ್ಲಿ ನಿದರ್ಶನ್‌ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು 100 ಮತ್ತು 200 ಮೀ. ಓಟಗಳಲ್ಲಿ ಪಾಲ್ಗೊಳ್ಳುತ್ತಾರೆ.

2013ರಿಂದ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಿದರ್ಶನ್‌ಗೆ ರಾಜ್ಯಮಟ್ಟದಲ್ಲಿ ಹೆಚ್ಚಿನ ಯಶಸ್ಸು ಸಿಗಲಿಲ್ಲ. 2019ರಲ್ಲಿ ರಾಷ್ಟ್ರೀಯ ಓಪನ್‌ ನ್ಯಾಷನಲ್‌ನಲ್ಲಿ ಸೆಮಿಫೈನಲ್‌ ತಲುಪಿದ್ದು ಅವರ ಇದುವರೆಗಿನ ಉತ್ತಮ ಸಾಧನೆಯಾಗಿದೆ. ಫೆಡರೇಷನ್‌ ಕಪ್‌ನಲ್ಲಿ ಸೆಮಿಫೈನಲ್‌ ತನಕ ತಲುಪಿದ್ದು ಕೂಡ ಅವರ ಉತ್ತಮ ಸಾಧನೆಗಳಲ್ಲೊಂದು.

ಕಾರ್ಯ ಒತ್ತಡ: ತಿರ್ಥಹಳ್ಳಿಯಲ್ಲಿ ಆನಿಮೇಷನ್‌ ಮತ್ತು ಗ್ರಾಫಿಕ್‌ ಡಿಸೈನ್‌ಲ್ಲಿ ಡಿಪ್ಲೊಮಾ ಪದವಿ ಗಳಿಸಿದ ನಿದರ್ಶನ್‌ ಉದ್ಯೋಗ ಹುಡುಕಿ ಬಂದದ್ದು ಬೆಂಗಳೂರಿಗೆ. ಈ ನಡುವೆ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸಕ್ತಿ ಮೂಡಿತು. ಬದುಕಿಗಾಗಿ ಚಾಮರಾಜ ಪೇಟೆಯಲ್ಲಿರುವ ತಮ್ಮ ಮಾವನವರ ಸ್ವೀಟ್‌ ಅಂಗಡಿಯಲ್ಲಿ ಕೆಸಲ ಮಾಡಬೇಕಾಯಿತು. ಹೊಟೇಲ್‌ಗಳಿಗೆ ಸ್ವೀಟ್‌ ಮಾರಾಟ ಮಾಡಬೇಕಾಗಿರುವುದರಿಂದ ಅಥ್ಲೆಟಿಕ್ಸ್‌ಗೆ ಹೆಚ್ಚಿನ ಸಮಯ ನೀಡಲಾಗುತ್ತಿರಲಿಲ್ಲ.

ಓಟದ ನಡುವೆ ತರಬೇತಿ: ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲುವುದರ ಜೊತೆಯಲ್ಲಿ ತನ್ನ ಬದುಕಿನ ಕಾರ್ಯ ಒತ್ತಡಗಳ ನಡುವೆ ನಿದರ್ಶನ್‌, ಕೋಚಿಂಗ್‌ ತರಬೇತಿಯನ್ನೂ ಪಡೆದಿರುತ್ತಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆ ನಡೆಸುವ ಲೆವೆನ್‌ ಒನ್‌ ಕೋರ್ಸ್‌ನಲ್ಲಿ ಅಗ್ರ ಸ್ಥಾನದೊಂದಿಗೆ ಉತ್ತೀರ್ಣರಾಗಿರುವುದು ವಿಶೇಷ. ಒಲಿಂಪಿಯನ್‌ ಅನಿಲ್‌ ಕುಮಾರ್‌, ಜಿನ್ಸಿ ಫಿಲಿಪ್‌ ಹಾಗೂ ಬಿಂದೂ ರಾಣಿ ಕೂಡ ಅಗ್ರ ಸ್ಥಾನ ಪಡೆದ ಇತರ ಅಥ್ಲೀಟ್‌ಗಳು. ಜೊತೆಯಲ್ಲಿ ಎನ್‌ಐಎಸ್‌ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿರುವ ನಿದರ್ಶನ ಕೆಲವು ಸಮಯ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಈ ಹಿಂದೆ ತರಬೇತಿ ನೀಡಿರುತ್ತಾರೆ. ಭಾರತದ ಪ್ಯರಾಲಿಂಪಿಕ್ಸ್‌ ಕೋಚ್‌ ಕೆ. ಸತ್ಯನಾರಾಯಣ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಕಾರ್ಯದರ್ಶಿ ರಾಜವೇಲು  ಅವರು ತಮಗೆ ನೆರವು ನೀಡಿರುವುದನ್ನು ನಿದರ್ಶನ್‌ ಈ ಸಂದರ್ಭದಲ್ಲಿ ಸ್ಮರಿಸುತ್ತಾರೆ.

ತೀರ್ಥಹಳ್ಳಿಯ ಕೈನಳ್ಳಿ ಗ್ರಾಮದ ಈಶ್ವರ್‌ ಹಾಗೂ ಜಾನಕಿ ದಂಪತಿಯ ಮಗನಾಗಿರುವ ನಿದರ್ಶನ್‌ ಚಿಕ್ಕ ವಯಸ್ಸಿನಲ್ಲೇ ಅಥ್ಲೆಟಿಕ್ಸ್‌ ಅಂಗಣದಲ್ಲಿ ತಾಂತ್ರಿಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗೆ ಆಲ್ರೌಂಡ್‌ ಕೆಲಸ ಮಾಡುವ ನಿದರ್ಶನ್‌ ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. “ಜೀವನೋಪಾಯಕ್ಕಾಗಿ ಸೇಲ್ಸ್‌ ಕೆಲಸ ಮಾಡುತ್ತಿರುವೆ, ಆದರೆ ಯಾವಾಗಲೂ ಅಥ್ಲೆಟಿಕ್ಸ್‌ ಅಂಗಣ ನನ್ನನ್ನು ಆಕರ್ಷಿಸುತ್ತಿರುತ್ತದೆ. ಕೇವಲ ಪದಕ ಗೆಲ್ಲುವುದೇ ನನ್ನ ಉದ್ದೇಶವಲ್ಲ. ಯಾವುದೇ ರೀತಿಯಲ್ಲಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿ ಸದಾ ಹಂಬಲಿಸುವೆ,” ಎನ್ನುತ್ತಾರೆ ನಿದರ್ಶನ್‌.

Related Articles