Friday, December 13, 2024

ಅಜ್ಮತ್‌ಉಲ್ಲಾ, ಹಸ್ಮತ್‌ಉಲ್ಲಾ ಅಫ್ಘಾನ್‌ ಗೆದ್ದಿತಲ್ಲಾ!

ಪುಣೆ: ಅಜ್ಮತ್‌ಉಲ್ಲಾ (73*) ಹಾಗೂ ಹಸ್ಮತ್‌ಉಲ್ಲಾ (58*) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಅಫಘಾನಿಸ್ತಾನ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. Afghanistan won the match by 7 wickets against Sri Lanka.

ಚೇಸಿಂಗ್‌ ಮೇಲೆ ಅಪಾರ ನಂಬಿಕೆ ಇಟ್ಟಿರುವ ತಂಡ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡು ಲಂಕಾ ಪಡೆಯನ್ನು 243 ರನ್‌ಗೆ ಕಟ್ಟಿ ಹಾಕಿತು. ಫಜಲ್‌ಹಕ್‌ ಫರೂಕಿ 34 ರನ್‌ಗೆ 4 ವಿಕೆಟ್‌ ಗಳಿಸಿ ಲಂಕೆಯ ರನ್‌ ಗಳಿಕೆಗೆ ಕಡಿವಾಣ ಹಾಕಿದರು.  ಸಾಧಾರಣ ಮೊತ್ತವನ್ನು ಬೆಂಬತ್ತಿದ ಅಫ್ಘಾನ್‌ ಮೊದಲ ಓವರ್‌ನಲ್ಲೇ ರಹಮಾನ್‌ಉಲ್ಲಾ ಗುರ್ಬಾಜ್‌ ಅವರ ವಿಕೆಟ್‌ ಕಳೆದುಕೊಂಡಿತು. ಆದರೆ ರಹಮತ್‌ ಶಾ 62 ರನ್‌ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ನಂತರ ಅಜ್ಮತ್‌ಉಲ್ಲಾ ಹಾಗೂ ಹಸ್ಮತ್‌ಉಲ್ಲಾ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿ ತಂಡಕ್ಕೆ ಅಮೂಲ್ಯ ಜಯ ತಂದಿತ್ತರು. ಹಸ್ಮತ್‌ಉಲ್ಲಾ 74 ಎಸೆತಗಳನ್ನೆದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ತಾಳ್ಮೆಯ ಆಟವಾಡಿ ಅಜೇಯ 58 ರನ್‌ ಗಳಿಸಿದರೆ. ಅಜ್ಮತ್‌ಉಲ್ಲಾ 63 ಎಸೆತಗಳನ್ನೆದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಜೇಯ 73 ರನ್‌ ಸಿಡಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಇನ್ನೂ 28 ಎಸೆತ ಬಾಕಿ ಇರುವಾಗಲೇ ತಂಡ ಮತ್ತೊಂದು ಐತಿಹಾಸಿಕ ಜಯ ಗಳಿಸಿ ಸಂಭ್ರಮಿಸಿತು.

ಇಂಗ್ಲೆಂಡ್‌ ವಿರುದ್ಧ 69 ರನ್‌ ಜಯ ನಂತರ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ ಜಯ ಈಗ ಶ್ರೀಲಂಕಾದ ವಿರುದ್ಧ 7 ವಿಕೆಟ್‌ ಜಯದ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ತಂಡ ಬಲಿಷ್ಠರನ್ನೇ ಬಗ್ಗು ಬಡಿಯಿತು. ಹಾಲಿ ಮತ್ತು ಮಾಜಿ ಸೇರಿ ಮೂವರು ವಿಶ್ವಚಾಂಪಿಯನ್ನರಿಗೆ ಆಘಾತ ನೀಡಿರುವುದು ವಿಶೇಷ. ಅಫಘಾನಿಸ್ತಾನ ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ತಲುಪಿದೆ. ಈಗ ಶುರುವಾಗಿದೆ ಸೆಮಿಫೈನಲ್‌ ತಲಪುವ ಲೆಕ್ಕಾಚಾರ. ನಡುವೆ ಕೋಚ್‌ ಇಂಗ್ಲೆಂಡ್‌ನ ಜೊನಾಥನ್‌ ಟ್ರಾಟ್‌ ಅವರನ್ನು ಇಲ್ಲಿ ಸ್ಮರಿಸಲೇಬೇಕು.

Related Articles