Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಶ್ವ ದಿವ್ಯಾಂಗರ ಸ್ನೂಕರ್‌ನಲ್ಲಿ ಕಂಚು ಗೆದ್ದ MRPLನ ಮುರಳಿರಾಜ್‌

ಮಂಗಳೂರು: ಕಳೆದ ವಾರ ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ದಿವ್ಯಾಂಗರ ವಿಶ್ವ ದಿವ್ಯಾಂಗರ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಎಂಆರ್‌ಪಿಎಲ್‌ MRPLನ ಮ್ಯಾನೇಜರ್‌ ಕದರಿ ಮುರಳಿರಾಜ್‌ ಅವರು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Mangalore Refinery and Petrochemicals Limited (MRPL) Manager Muraliraj has brought glory to the country by winning a bronze medal at the World Disability Billiards and Snooker Championship

ಮೂಲತಃ ತೆಲಂಗಾಣದ ವಾರಂಗಲ್‌ ನಿವಾಸಿಯಾಗಿರುವ ಮುರಳಿರಾಜ್‌ ಅವರ ಬಲಕಾಲಿಗೆ ಚಿಕ್ಕಂದಿನಲ್ಲಿಯೇ ಪೋಲಿಯೋ ಪೀಡಿತವಾಗಿತ್ತು. ಆದರೆ ಕ್ರೀಡೆಯ ಮೂಲಕ ಸಾಧನೆ ಮಾಡಬೇಕೆಂಬ ಅವರ ಛಲಕ್ಕೆ ದೈಹಿಕ ನ್ಯೂನ್ಯತೆ ಅಡ್ಡಿಯಾಗಲಿಲ್ಲ. ಸವಾಲುಗಳನ್ನು ಮೆಟ್ಟಿನಿಂತ ಅವರು ಕ್ಯೂ ಸ್ಪೋರ್ಟ್ಸ್‌ ಮೂಲಕ ಯಶಸ್ಸಿನ ಹಾದಿ ತುಳಿದರು ಮಾತ್ರವಲ್ಲ ದೇಶಕ್ಕೂ ಕೀರ್ತಿ ತಂದರು.

ಎಂಬಿಎ ಫೈನಾನ್ಸ್‌ ಪದವೀಧರ:

ಬಿಎಚ್‌ಇಎಲ್‌ ನಿವೃತ್ತ ಉದ್ಯೋಗಿಯಾಗಿರುವ ಕದರಿ ಮೊಂಡಯ್ಯ ಹಾಗೂ ಕದರಿ ಶಾಂತಾ ದಂಪತಿಯ ಪುತ್ರ ಮುರಳಿರಾಜ್‌ ಓದಿನ ಜೊತೆಯಲ್ಲಿ ಕ್ರೀಡೆಯಲ್ಲಿಯೂ ಯಶಸ್ಸನ್ನು ಕಂಡವರು. ಹುಟ್ಟಿದ ಮೊದಲ ವರ್ಷದಲ್ಲೇ ಪೋಲಿಯೋಗೆ ತುತ್ತಾದ ಮುರಳಿರಾಜ್‌ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ತಮ್ಮಲ್ಲಿರುವ ನಿತಂತರ ಹೋರಾಟ ಹಾಗೂ ಛಲದ ಗುಣಗಳಿಂದಾಗಿ ಬದುಕಿನಲ್ಲಿ ಯಶಸ್ಸಿನ ಹಾದಿ ತುಳಿದರು.

ನೆರವಾದ ಗೋವಿಂದ ಅಗರ್ವಾಲ್‌:

ಮುರಳಿರಾಜ್‌ ಅವರಿಗೆ ಸ್ನೂಕರ್‌ ಕ್ರೀಡೆಯನ್ನು ಪರಿಚಯಿಸಿದ್ದು, ಗೆಳೆಯ ಹಾಗೂ ಬ್ಯಾಡ್ಮಿಂಟನ್‌ ಆಟಗಾರ ಗೋವಿಂದ ಅಗರ್ವಾಲ್‌. “2017ರಲ್ಲಿ ಸ್ನೂಕರ್‌ ಕ್ರೀಡೆಯ ಪರಿಚಯವಾಯಿತು. ಆರಂಭದಲ್ಲಿ ಗೆಳೆಯನ ಸಲಹೆ ಮೇರೆಗೆ ಸೇರಿದೆ, ನಂತರ ಈ ಕ್ರೀಡೆಯಲ್ಲಿ ನನಗೆ ಆಸಕ್ತಿ ಹುಟ್ಟಿಕೊಂಡಿತು,” ಎನ್ನುತ್ತಾರೆ ಮರಳಿರಾಜ್‌. 2016ರಲ್ಲಿ ಮುರಳಿರಾಜ್‌ ಮಂಗಳೂರಿಗೆ ಆಗಮಿಸಿದರು.

ಮೂರನೇ ಬಾರಿ ಯಶಸ್ಸು:

ಮುರಳಿರಾಜ್‌ ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ಸೇರಿದಂತೆ ಮೂರು ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಪದಕದ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈ ಬಾರಿ  ಪದಕ ಗೆಲ್ಲುವಲ್ಲಿ ಮುರಳಿರಾಜ್‌ ಯಶಸ್ವಿಯಾದರು. “ಆರಂಭದ ಸೋಲುಗಳಿಂದ ಕಲಿತ ಪಾಠ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ನೆರವಾಯಿತು”, ಎನ್ನುತ್ತಾರೆ ಮುರಳಿರಾಜ್‌. ಈ ಯಶಸ್ಸಿನ ಹಾದಿಯಲ್ಲಿ ಪತ್ನಿ ವೈಶಾಲಿ ಕುಮಾರ್‌ ಅವರು ಮುರಳಿರಾಜ್‌ಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿರುತ್ತಾರೆ.

ಯಶಸ್ಸಿಗೆ ನೆರವಾದ  MRPL

ಮುರಳಿರಾಜ್‌ ಅವರ ಯಶಸ್ಸಿಗೆ Mangalore Refinery and Petrochemicals Limited ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಮಾಲತೇಶ್‌ ಎಂ.ಎಚ್. (Materials) ಅವರು ಮುರಳಿರಾಜ್‌ ಅವರ ಯಶಸ್ಸಿನ ಹಾದಿಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಅವರು ನನಗೆ ಸ್ನೂರಕ್‌ ಕ್ರೀಡೆಯ ಆರಂಭಿಕ ಹಂತಗಳನ್ನು ಕಲಿಸಿದರು. ನಂತರ ಉತ್ತಮ ಆಟಗಾರನಾಗುವಲ್ಲಿ ನೆರವಾದರು. ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌ (PSPB) ನಡೆಸು ಟೂರ್ನಿಗಳಲ್ಲಿ ಮುರಳಿರಾಜ್‌ ಅವರು ಪಾಲ್ಗೊಳ್ಳಲು ಮಾಲತೇಶ್‌ ಅವರು ನೆರವಾಗಿರುವುದನ್ನು ಸ್ಮರಿಸುತ್ತಾರೆ. ಕ್ರೀಡಾ ಬದುಕಿನ ಹಾದಿಯಲ್ಲಿ ಮಾಲತೇಶ್‌ ಅವರು ನನ್ನ ಯಶಸ್ಸಿನ ಗುರುಗಳಾಗಿ ಕಾರ್ಯನಿರ್ವಹಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಎಂದು ಮುರಳಿರಾಜ್‌ ಹೇಳಿದ್ದಾರೆ.

ಮುರಳಿರಾಜ್‌ ಅವರನ್ನು ಒಬ್ಬ ಚಾಂಪಿಯನ್‌ ಆಗಿ ರೂಪಿಸುವಲ್ಲಿ ನೆರವಾದ ಇನ್ನೋರ್ವ ಚಾಂಪಿಯನ್‌, ವರುಣ್‌ ರಾವ್‌. ರಾಜ್ಯ ಮಟ್ಟದ ಸ್ನೂಕರ್‌ ಆಟಗಾರರಾಗಿರುವ ವರುಣ್‌ ರಾವ್‌, ಉತ್ತಮ ರೀತಿಯಲ್ಲಿ ತರಬೇತಿ ನೀಡಿ ಮುರಳಿರಾಜ್‌ ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಲು ನೆರವಾದರು. ತರಬೇತಿಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟ MERC CLUB ನ ಅಧ್ಯಕ್ಷ ಸುಶಾಂತ್‌ ಮೋಹಪಾತ್ರ ಅವರನ್ನೂ ಮುರಳಿರಾಜ್‌ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.ತರಬೇರತಿಯಲ್ಲಿ ಗೆಳೆಯ, ಸಹೋದ್ಯೋಗಿ ಲೋಹಿತ್ ಬಂಗೇರ (Lohit Bangera) ಕೂಡ ಮುರಳಿರಾಜ್‌ಗೆ ನೆರವಾಗಿದ್ದಾರೆ.

ಎಂಆರ್‌ಪಿಎಲ್‌ನಲ್ಲಿ ಮ್ಯಾನೇಜರ್‌ (Internal Audit) ಆಗಿ ಕಾರ್ಯನಿರ್ವಹಿಸುತ್ತಿರುವ ಮುರಳಿರಾಜ್‌, MRPL ಹಾಗೂ PSPB ನೆರವಿನಿಂದಾಗಿ ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿ ಸಿಕ್ಕಿದೆ ಎಂದಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.