Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಣ್ಣನ ಕ್ರೀಡಾ ಬದುಕಿಗಾಗಿ ತಮ್ಮನ ದುಡಿಮೆ

ರಾಯ್ಪುರ: ತಮ್ಮನ ಯಶಸ್ಸಿಗಾಗಿ ಅಣ್ಣ ದುಡಿಯುವುದನ್ನು ಕೇಳಿದ್ದೇವೆ ಆದರೆ ಇಲ್ಲೊಬ್ಬ ಕ್ರೀಡಾಪಟುವಿನ ಬದುಕಿಗಾಗಿ ಆತನ ತಮ್ಮ ದುಡಿಯುತ್ತಿದ್ದಾನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಮಾತನಾಡುವುದು ನೋಡಿದರೆ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳು ಇಲ್ಲ ಎಂದೆನಿಸುತ್ತದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಗರ್ತಿ ಗ್ರಾಮದ ರೇಸ್‌ವಾಕರ್‌ ದರ್ಶನ್‌ ಬಾಗಡಿ ಅವರ ಬದುಕಿನ ಕಷ್ಟವನ್ನು ಕೇಳಿದಾಗ ನಮ್ಮ ರಾಜ್ಯದಲ್ಲಿ ಕ್ರೀಡಾ ಪರಿಸ್ಥಿತಿಯ ಬಗ್ಗೆ ಬೇಸರವಾಗುತ್ತದೆ. Brother Krishna working hard for his elder brother Darshan’s sporting achievements in Hogarti village of Bailhongal taluk of Belgaum.

ದರ್ಶನ ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ 10000 ಮೀ ರೇಸ್‌ವಾಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರ ಕ್ರೀಡಾ ಸಾಧನೆ ಹಾಗೂ ಓದಿಗೆ ನೆರವಾಗುತ್ತಿರುವುದು ತಮ್ಮ ಕೃಷ್ಣ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ದರ್ಶನ್‌ ಅವರ ತಾಯಿ ಶೇಕವ್ವ ಹೊಲದಲ್ಲಿ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಓದಿನಲ್ಲಿ ಹಿಂದೆ ಬಿದ್ದಿರುವ ಕೃಷ್ಣ ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ನಂತರ ಗಾರೆ ಕೆಲಸದಲ್ಲಿ ತೊಡಗಿಕೊಂಡ. ಈಗ ತಮ್ಮನ ಓದು ಹಾಗೂ ಕ್ರೀಡಾ ಬದುಕಿಗೆ ಅಣ್ಣನ ಗಾರೆ ಕೇಲಸವೇ ಆಶ್ರಯ.

ದರ್ಶನ್‌ ಬೆಳಗಾವಿಯ ನೇಸರಗಿಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ರಾಜ್ಯಮಟ್ಟದ ರೇಸ್‌ವಾಕ್‌ನಲ್ಲಿ ಉತ್ತಮ ಸಾಧನೆ ತೋರಿದ ಕಾರಣ ಕ್ರೀಡೆಯಲ್ಲಿ ಮುಂದುವರಿಯಬೇಕೆಂಬ ಹಂಬಲವಾಯಿತು. ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ಇದರಿಂದಾಗಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಯಿತು. ಖೇಲೋ ಇಂಡಿಯಾ, ದಕ್ಷಿಣವಲಯ ಕ್ರೀಡಾಕೂಟ, ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ, ಎಸ್‌ಜಿಎಫ್‌ಐ ಮೊದಲಾದ ಕ್ರೀಡಾಕೂಟಗಳಲ್ಲಿ ದರ್ಶನ್‌ ಪಾಲ್ಗೊಂಡರು. ರಾಷ್ಟ್ರ ಮಟ್ಟದಲ್ಲಿ ಮೂರು ಬೆಳ್ಳಿಯ ಪದಕ ಗೆದ್ದರು.

ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಬಳಿಕ sportsmail ಜೊತೆ ಮಾತನಾಡಿದ ದರ್ಶನ್‌ ಬದುಕಿನ ಕೆಲವು ನೋವುಗಳನ್ನು ಹಂಚಿಕೊಂಡರು. “ನಮ್ಮಮ್ಮ ಹೊದಲ್ಲಿ ಕೂಲಿ ಮಾಡಿ ನಮ್ಮನ್ನು ಸಾಕಿದರು. ತಮ್ಮ ಕೂಡ ನನ್ನ ಓದು ಮತ್ತು ಕ್ರೀಡೆಗೆ ನೆರವಾಗುತ್ತಿದ್ದಾನೆ. ಮೂಡಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ನೆರವು ನೀಡುತ್ತಾರೆ. ಆದರೆ ಫಿಟ್ನೆಸ್‌ ಹಾಗೂ ಇತರ ಖರ್ಚುಗಳಿರುತ್ತವೆ. ಟೂರ್ನಿಗಳಿಗೆ ಸಾಲ ಮಾಡಿ ಹೋಬೇಕಾಗುತ್ತದೆ. ಟೂರ್ನಿ ಮುಗಿಸಿ ಬಂದ ನಂತರ ರೈಲಿನ ಪ್ರಯಾಣ ವೆಚ್ಚವನ್ನು ನೀಡುತ್ತಾರೆ. ವಾಕ್‌ರೇಸ್‌ಗೆ ಬಳಸುವ ಶೂ ದುಬಾರಿಯಾಗಿರುತ್ತದೆ. ನಮ್ಮ ಹೈಸ್ಕೂಲ್‌ನ ಹೆಡ್‌ಮಾಸ್ಟರ್‌ ತಲ್ಲೂರ್‌ ಸರ್‌ ಹಾಗೂ ಅಮ್ಮ ಮತ್ತು ತಮ್ಮನ ದುಡಿಮೆಯಿಂದ ಕಳೆದ ವರ್ಷ ಒಂದು ಶೂ ಖರೀದಿಸಿದೆ. ಈ ಬಾರಿ ಹಾಳಾದ ಶೂನಲ್ಲೇ ಓಡುವಂತಾಯಿತು. ಒಮ್ಮೆಮ್ಮೆ ಅಮ್ಮ ಹಾಗೂ ತಮ್ಮನಿಗೆ ಕಷ್ಟಕೊಟ್ಟು ಈ ಕ್ರೀಡೆಯಲ್ಲಿ ಯಾಕೆ ಮುಂದುವರಿಯಬೇಕೆನಿಸುತ್ತದೆ. ಇನ್ನೆರಡು ವರ್ಷ ಓದನ್ನು ಪೂರ್ಣಗೊಳಿಸಿ ಎಲ್ಲಿಯಾದರೂ ಕೆಲಸ ಸೇರಿಕೊಂಡು ದುಡಿಯಬೇಕು,” ಎಂದು ದರ್ಶನ್‌ ಹೇಳಿದಾಗ ಬುಡಕಟ್ಟು ಸಮುದಾಯದ ಕ್ರೀಡಾಪಟುಗಳು ಎದುರಿಸುತ್ತಿರುವ ಕಷ್ಟದ ಅರಿವಾಗದಿರದು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.