Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಅರಳಿದ ಬಿಲ್ಗಾರ ಸುಜಿತ್‌

ರಾಯ್ಪುರ್‌: ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆಯುತ್ತಿರುವ ಭಾರತದ ಮೊದಲ ಬುಡಕಟ್ಟು ಸಮುದಾಯದ ಕ್ರೀಡಾಕೂಟ ಖೇಲೋ ಇಂಡಿಯಾ ಟ್ರೈಬಲ್‌ ಗೈಮ್ಸ್‌ನಲ್ಲಿ ಕಷ್ಟಗಳನ್ನೇ ಮೆಟ್ಟಿನಿಂತ ಅದ್ಭುತ ಬಿಲ್ಗಾರರೊಬ್ಬರ ಪರಿಚಯವಾಯಿತು. ಭಾರತದ ಶ್ರೇಷ್ಠ ಕಾಫಿ ಬ್ರಾಂಡ್‌ ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ಧಾರ್ಥ ಅವರ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಶಂಕರ ಹಾಗೂ ಪ್ರೇಮ ದಂಪತಿಯ ಮಗ ಸುಜಿತ್‌ ಕೆ. ಎಸ್‌. ಬದುಕಿನ ಕತೆ ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. The life story of Sujith K. S son of Shankar and Prema, who worked as labourers in the coffee plantation of V. G. Siddhartha, owner of India’s leading coffee brand Cafe Coffee Day, has become an inspiration to other athletes.

ಕರ್ನಾಟಕ ರಾಜ್ಯ ಯುವ ಸಬಲೀಕರಣ & ಕ್ರೀಡಾ ಇಲಾಖೆಯಲ್ಲಿ ಇತ್ತೀಚಿಗೆ ಆರ್ಚರಿ ತರಬೇತುದಾರರಾಗಿ ಸೇರಿದ ಸುಜಿತ್‌ ಅವರು ನಡೆದು ಬಂದ ಹಾದಿ ಕಠಿಣವಾಗಿತ್ತು. ಪ್ರಾಥಮಿಕ ಶಿಕ್ಷಣವನ್ನು ಮೂಡಿಗೆರೆಯಲ್ಲಿ ಮುಗಿಸಿದ ಸುಜಿತ್‌, ವಾಲಿಬಾಲ್‌ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಬಯಸಿ ಶಿಕ್ಷಕ ಅಬ್ದುಲ್‌ ಕಾದರ್‌ ಅವರ ಸಲಹೆ ಮೇರೆಗೆ ಚಾಮರಾಜನಗರಲ್ಲಿರುವ ಡಿವೈಎಎಸ್‌ ಕ್ರೀಡಾ ಹಾಸ್ಟೆಲ್‌ಗೆ ಸೇರಿದರು. ಅಲ್ಲಿ ವಾಲಿಬಾಲ್‌ ಬದಲಿಗೆ ಬಿಲ್ಗಾರಿಕೆ (ಆರ್ಚರಿ) ಗೆ ಪ್ರವೇಶ ಸಿಕ್ಕಿತು. ಬೇರೆ ದಾರಿ ಕಾಣದೆ ಸುಜಿತ್‌ ಬಿಲ್ಗಾರಿಕೆ ತರಬೇತಿಯ ಹೆಸರಿನಲ್ಲಿ ಎಂಟನೇ ತರಗತಿಗೆ ಸೇರ್ಪಡೆಯಾದರು.

ಬಿಲ್ಲು ಬಾಣಗಳೇ ಇಲ್ಲದೆ ಆರ್ಚರಿ ತರಬೇತಿ: ಚಾಮರಾಜಗರದಲ್ಲಿ ಬಿಲ್ಗಾರಿಕೆ ತರಬೇತಿ ಪಡೆಯಲು ಪ್ರವೇಶ ಸಿಕ್ಕಿದೆ. ಆದರೆ ಅಲ್ಲಿ ಬಿಲ್ಲು ಬಾಣಗಳೇ ಕಾಣುತ್ತಿಲ್ಲ. ಗುಣಶೀಲ ಎಂಬ ತಮಿಳುನಾಡಿನ ಕೋಚ್‌ ಆರ್ಚರಿ ಗುರುಗಳಾಗಿದ್ದರು. ಕ್ರೀಡಾ ಹಾಸ್ಟೆಲ್‌ ಸೇರಿ ಎರಡು ವರ್ಷವಾದ ಬಳಿಕ ಬಿಲ್ಗಾರಿಕೆ ಸಾಮಗ್ರಿಗಳು ಬಂದವು. ಅಲ್ಲಿಯವರೆಗೆ ಕಲ್ಲು, ರಬ್ಬರು ಇವುಗಳ ಮೂಲಕ ತರಬೇತಿ ನಡೆಯುತ್ತಿತ್ತು. ಸೈಕಲ್‌ ಟ್ಯೂಬ್‌ ಹಿಡಿದು ಎಳೆದು ಕೈಗೆ ಅಗತ್ಯವಿರುವ ಕಸರತ್ತುಗಳನ್ನು ಮಾಡಿಸಲಾಗುತ್ತಿತ್ತು. ಬಿಲ್ಗಾರಿಕೆಗೆ ಕೈ ಬಲಿಷ್ಠವಾಗಿರಬೇಕಿತ್ತು. ಬಿಲ್ಗಾರಿಕೆಯಲ್ಲಿ ಯಾರೆಲ್ಲ ತೊಡಗಿಕೊಂಡಿದ್ದರೋ ಅವರೇ ಅಂಗಡಿಗೆ ಹೋಗಿ ಹಳೆ ಟ್ಯೂಬುಗಳನ್ನು ತಂದು ಅಭ್ಯಾಸ ಮಾಡುತ್ತಿದ್ದರು. ಎರಡು ವರ್ಷಗಳ ವರೆಗೂ ರಬ್ಬರ್‌ ಎಳೆಯುವ ಕಾರ್ಯ ಮುಂದುವರಿಯಿತು. ಬಾಟಲಿಗೆ ಮರಳು ಹಾಕಿ ಸ್ಟ್ರೆಚ್‌ ಮಾಡುವುದು. ಎರಡು ವರ್ಷಗಳ ನಂತರ ಬಿಲ್ಲು ಬಾಣ ಬಂತು. ಆ ಬಳಿಕ ಸುಜಿತ್‌ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲಾರಂಭಿಸಿದರು.

ಕ್ರೀಡಾ ಕುಟುಂಬ: ಬುಡಕಟ್ಟು ಸಮುದಾಯಕ್ಕೆ ಸೇರಿದ ಶಂಕರ ಹಾಗೂ ಪ್ರೇಮ ದಂಪತಿಗೆ ಮೂವರು ಮಕ್ಕಳು. ಹಿರಿಯ ಮಗ ಮತ್ತು ಮಗಳು ವಾಲಿಬಾಲ್‌ ಆಟಗಾರರು. ಬಡತನದಿಂದಾಗಿ ಕ್ರೀಡೆಯಲ್ಲಿ ಮುಂದುವರಿಯಲಾಗಲಿಲ್ಲ. ಸುಜಿತ್‌ ಅವರ ಅಣ್ಣ ಸುದೀಪ್‌ ವಾಲಿಬಾಲ್‌ ಆಟಗಾರರಾಗಿದ್ದು, ಸದ್ಯ ದೈಹಿಕ ಶಿಕ್ಷಣ ಅಧ್ಯಯನ ಮಾಡುತ್ತಿದ್ದಾರೆ. ಸಹೋದರಿ ಸ್ವಾತಿ ಕೂಡ ವಾಲಿಬಾಲ್‌ ಆಟ ಸ್ವಾತಿ ಕೂಡ ವಾಲಿಬಾಲ್‌ ಅಟಗಾರ್ತಿಯಾಗಿದ್ದು ಸದ್ಯ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

ಕಲಿತ ಕ್ರೀಡಾ ಹಾಸ್ಟೆಲ್‌ಗೇ ಕೋಚ್‌ ಆಗಿ ಸೇರ್ಪಡೆ: ಹತ್ತು ವರ್ಷಗಳ ಹಿಂದೆ ಮೈಸೂರು ಕ್ರೀಡಾ ಹಾಸ್ಟೆಲ್‌ಗೆ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ಸುಜಿತ್‌ ಈಗ ಅದೇ ಕ್ರೀಡಾ ಹಾಸ್ಟೆಲ್‌ನಲ್ಲಿ ಕೋಚ್‌ ಆಗಿ ಉದ್ಯೋಗ ಪಡೆದಿರುವುದು ವಿಶೇಷ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಯಶಸ್ಸು ಕಾಣುತ್ತಲೇ ಆರ್ಚರಿ ಕೋಚಿಂಗ್‌ನಲ್ಲಿ ಪಳಗಿದ ಸುಜಿತ್‌ ತರಬೇತಿಗೆ ಅಗತ್ಯ ಇರುವ ಅರ್ಹತೆ ಗಳಿಸಿದರು.  ಸುಮಾರು 25 ವಿದ್ಯಾರ್ಥಿಗಳಿಗೆ ಸುಜಿತ್‌ ತರಬೇತಿ ನೀಡುತ್ತಿದ್ದಾರೆ. ಹಲವು ಬಿಲ್ಗಾರರು  ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ  ಮಲ್ಲಿಕಾರ್ಜುನ ಅವರು ಛತ್ತೀಸ್‌ಗಢದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾರೆ. ಸುಜಿತ್‌ ಅವರ ಯಶಸ್ಸಿಗೆ ನೆರವಾದವರು ಬೆಂಗಳೂರಿನ ತರಬೇತುದಾರ ಸುನಿಲ್‌ ಕುಮಾರ್‌.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.