ಒಂಟಿಗಾಲಿನ ಟೆನಿಸ್ ಆಟಗಾರನಿಗೆ ಬೇಕಿದೆ ಸರಕಾರದ ನೆರವು
ಬೆಂಗಳೂರು: “ಸರ್, ನಾನು ದೇಶದ ನಂಬರ್ ಒನ್ ವೀಲ್ ಚೇರ್ ಟೆನಿಸ್ ಆಟಗಾರ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವೆ, ಓದಿದ್ದು ಕಡಿಮೆ, ಮೊದಲು ಸ್ಲಮ್‌ನಲ್ಲಿ ವಾಸಿಸುತ್ತಿದ್ದ ನಾನು ಈಗ ಬಾಡಿಗೆ ಮನೆಯಲ್ಲಿರುವೆ, ತಂದೆ ಹೃದಯಾಘಾತದಿಂದ ನಿಧನರಾದರು, ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಮಕ್ಕಳಿಗೆ ಬದುಕು ನೀಡಬೇಕು,” ಎಂದು ಕಣ್ಣೀರಿಟ್ಟ ದೇಶದ ನಂಬರ್ ವೀಲ್‌ಚೇರ್ ಟೆನಿಸ್ ತಾರೆ, ಅಂತಾರಾಷ್ಟ್ರೀಯ ಆಟಗಾರ ಶೇಖರ್ ವೀರಸ್ವಾಮಿ ಅವರ ಬದುಕಿನ ಕತೆ ಕೇಳಿದಾಗ ಎಂಥವರ ಮನಸ್ಸೂ ಕರಗದಿರದು. International wheelchair player Shekhar Veeraswamy, who has won over a hundred medals in national and international wheelchair tennis, needs a job.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ಬಾಲ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶೇಖರ್ ವೀರಸ್ವಾಮಿ, ದುರಂತ ಘಟನೆಯಲ್ಲಿ ಕಾಲು ಕಳೆದುಕೊಂಡು ದಿವ್ಯಾಂಗರಾದರು. ಟೆನಿಸ್ ಆಟಗಾರನಾಗಬೇಕೆಂದಿದ್ದ ಅವರ ಬದುಕು ಬಾಲ್ ಬಾಯ್ ಆಗಿಯೇ ಮುಂದುವರಿದಿತ್ತು. ಕರ್ನಾಟಕ ರಾಜ್ಯ ವೀಲ್ ಚೇರ್ ಟೆನಿಸ್ ಸಂಸ್ಥೆಯ ನೆರವಿನಿಂದ ವೀಲ್ ಚೇರ್ ಟೆನಿಸ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳವು ಮೂಲಕ ಶೇಖರ್ ವೀರಸ್ವಾಮಿ ಇಂದು ಅಂತಾರಾಷ್ಟ್ರೀಯ ವೀಲ್ ಚೇರ್ ಟೆನಿಸ್ ಆಟಗಾರರೆನಿಸಿದ್ದಾರೆ, ಮಾತ್ರವಲ್ಲ ಭಾರತದ ನಂ.1 ಆಟಗಾರರಾಗಿದ್ದಾರೆ.

2011ರಲ್ಲಿ ಬೆಂಗಳೂರಿನಲ್ಲಿ ನಡೆದ ಎರಡನೇ ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಶೇಖರ್ ವೀರಸ್ವಾಮಿ ದೇಶದ ಗಮನ ಸೆಳೆಯಲಾರಂಭಿಸಿದರು. ಇತ್ತೀಚಿಗೆ ಕೊಲಂಬೋದಲ್ಲಿ ನಡೆದ ಬಿಎನ್‌ಪಿ ಪಾರಿಬಸ್ ಅಂತಾರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಶೇಖರ್ ಇದುವರೆಗೂ ನೂರಕ್ಕೆ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪಳಗಿರುವ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ.
ನಾನು ಓದಿಲ್ಲ ನಿಜ, ಆದರೆ ದುಡಿಯಬೇಕು: ಶೇಖರ್ ವೀರಸ್ವಾಮಿ ಶಾಲೆಗೆ ಹೋಗಿಲ್ಲ, ಅಂದರೆ ಓದಿಲ್ಲ. ಇದು ಅವರಿಗೆ ಉದ್ಯೋಗ ಪಡೆಯಲು ಅಡ್ಡಿಯಾಗಿದೆ. “ನಾನು ವೀಲ್ ಚೇರ್ ಟೆನಿಸ್‌ನಲ್ಲಿ ಇದುವರೆಗೂ ಉತ್ತಮ ಸಾಧನೆ ಮಾಡಿರುವೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದಿರುವೆ, ಆದರೆ ನನ್ನ ಕ್ರೀಡಾ ಸಾಧನೆ ನನಗೆ ನೆರವಾಗುತ್ತಿಲ್ಲ. ಮುಂಬೈಯ ಹೆಲ್ಪ್ ಫೌಂಡೇಷನ್ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದೆ. ವೀಲ್ ಚೇರ್ ಟೆನಿಸ್ ಸಂಸ್ಥೆಯ ಅಧ್ಯಕ್ಷರಾದ ಚಂದ್ರಕಾಂತ್ ಬಲ್ದೋಟ ಅವರು ಸಹಾಯ ಮಾಡುತ್ತಿದ್ದಾರೆ. ಆದರೆ ನನ್ನ ಪಾಲಿನ ದುಡಿಮೆ ಎಂಬುದಿಲ್ಲ. ತಾಯಿಯ ಆರೈಕೆ ಮಾಡಬೇಕು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯವರು ಬಾಲ್‌ಬಾಯ್ ಕೆಲಸ ಮಾಡಿದ್ದಕ್ಕೆ ನೆರವು ನೀಡುತ್ತಾರೆ. ಆದರೆ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ. ಸರಕಾರ ನನ್ನ ಕಷ್ಟವನ್ನು ಗಮನಿಸಿ ನೆರವು ನೀಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ,” ಎಂದು ಶೇಖರ್ ವೀರಸ್ವಾಮಿ ಕರ್ನಾಟಕ ಸರಕಾರವನ್ನು ಮನವಿ ಮಾಡಿಕೊಂಡಿದ್ದಾರೆ.

ಕ್ರೀಡೆಯಲ್ಲಿ ಸಾಧನೆ ಮಾಡುವವರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕ್ರೀಡಾ ಸಾಧನೆಯ ಜೊತೆಯಲ್ಲಿ ನಿಮ್ಮ ಶಿಕ್ಷಣದ ಕಡೆಗೂ ಗಮನ ಹರಿಸಿ. ಇಲ್ಲವಾದಲ್ಲಿ ನಿಮ್ಮ ಕ್ರೀಡಾ ಸಾಧನೆಗೆ ಸೂಕ್ತವಾದ ಉದ್ಯೋಗವನ್ನು ನೀಡಲು ಅಸಾಧ್ಯವಾಗುತ್ತದೆ. ಒಂದು ವೇಳೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಕೆಳ ಮಟ್ಟದ ಕೆಲಸವನ್ನು ನೀಡಿದರೆ ಈ ಸಮಾಜ ಅದನ್ನೂ ಕೇಳುತ್ತದೆ. ಆದ್ದರಿಂದ ಓದಿನ ಜೊತೆಯಲ್ಲಿ ಕ್ರೀಡೆ ಇರಲಿ, ಕ್ರೀಡೆಯ ಜೊತೆಯಲ್ಲಿ ಓದಿರಲಿ.

