ಅಖಿಲ ಭಾರತ ಬ್ಯಾಡ್ಮಿಂಟನ್: ಕರ್ನಾಟಕದ ತುಷಾರ್ ಚಾಂಪಿಯನ್
ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಯೊನೆಕ್ಸ್-ಸನ್ರೈಸ್ ಅಖಿಲ ಭಾರತ ರಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ತುಷಾರ್ ಸುವೀರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. Karnataka’s Tushar Suveer has won the men’s singles title at the Yonex-Sunrise All India Ranking Badminton Championship.
ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 8ನೇ ರಾಂಕ್ ಆಟಗಾರ ಕರ್ನಾಟಕದ ತುಷಾರ್ ಸುವೀರ್ ಅವರು ಮಧ್ಯಪ್ರದೇಶದ ಅಲ್ಪಾ ಮಿಶ್ರಾ ಅವರನ್ನು 21-12, 21-10 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ವನಿತೆಯರ ಸಿಂಗಲ್ಸ್ನಲ್ಲಿ ನಂಬರ್ 1 ಆಟಗಾರ್ತಿ ಉತ್ತರ ಪ್ರದೇಶದ ಮಾನ್ಸಿ ಸಿಂಗ್ ಮಹಾರಾಷ್ಟ್ರದ ಶೃತಿ ಮುಂದಾದ ವಿರುದ್ಧ 21-16, 16-21, 21-10 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದರು.

ಪುರುಷರ ಡಬಲ್ಸ್ನಲ್ಲಿ ಕರ್ನಾಟಕದ ಪವನ್ ಎಸ್ ಹಾಗೂ ಪುನೀತ್ ಎಸ್ ಜೋಡಿ ಕೇರಳದ ಕಮಲ್ ಕೃಷ್ಣನ್ ಹಾಗೂ ಶಂಕರ ಪ್ರಸಾದ್ ಉದಯ ಕುಮಾರ್ ಜೋಡಿಯನ್ನು 21-16, 21-13 ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಮಹಿಳೆಯ ಡಬಲ್ಸ್ನಲ್ಲಿ ಉತ್ತರ ಪ್ರದೇಶದ ಅದಿತಿ ಭಟ್ ಹಾಗೂ ಮಹಾರಾಷ್ಟ್ರದ ಶ್ರವಣ್ ವಾಲೇಕರ್ ಜೋಡಿ ಕರ್ನಾಟಕದ ಅಮೃತಾ ಪಿ ದೆಹಲಿಯ ಲಿತಿಕಾ ಶ್ರೀವಾಸ್ತವ್ ಜೋಡಿಯನ್ನು 21-9, 21-13 ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಮಿಶ್ರ ಡಬಲ್ಸ್ನಲ್ಲಿ ದೆಹಲಿಯ ನಿತಿನ್ ಕುಮಾರ್ ಹಾಗೂ ಲಿತಿಕಾ ಶ್ರೀವಾಸ್ತವ್ ಜೋಡಿ ಹರಿಯಾಣದ ಆರ್ಯನ್ ಸಪಿಹ್ಯಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿಯನ್ನು 19-21, 21-17, 21-16 ಅಂತರದಲ್ಲಿ ಮಣಿಸಿತು.

ಎಂಟು ದಿನಗಳ ಕಾಲ ನಡೆದ ಚಾಂಪಿಯನ್ಷಿಪ್ಗೆ 1730 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ನಂತರ 5 ಸ್ಪರ್ಧೆಗಳಲ್ಲಿ 1635 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿರುವುದು ಸೇರಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್ನಲ್ಲಿ ಒಟ್ಟು 1725 ಪಂದ್ಯಗಳು ನಡೆಯಿತು. ಎಲ್ಲ ವಿಭಾಗಗಳೂ ಸೇರಿ ಒಟ್ಟು 10 ಲಕ್ಷ ರೂ. ಬಹುಮಾನ ಒಳಗೊಂಡಿತ್ತು, ಅಶ್ವಿನಿ ಪುನೀತ್ ರಾಜ್ ಕುಮಾರ್, ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಕುಮಾರ ಬಂಗಾರಪ್ಪ ಹಾಗೂ ಕೆಬಿಎ ಕಾರ್ಯದರ್ಶಿ ಮುರಳೀಧರ್ ವಿ. ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

