ವೇಟ್ಲಿಫ್ಟಿಂಗ್ನಲ್ಲಿ ಮಿಂಚುತ್ತಿರುವ ಬೈಂದೂರಿನ ಸುಬ್ರಹ್ಮಣ್ಯ
ಉಡುಪಿ: ಪಂಜಾಬ್ ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬೈಂದೂರಿನ ಗೋಳಿಹೊಳೆ ಗ್ರಾಮಪಂಚಾಯಿತಿಯ ಎಳಜಿತ ಗ್ರಾಮದ ಬಡವರ ಮನೆಯ ಪ್ರತಿಭೆ ಸುಬ್ರಹ್ಮಣ್ಯ ಗೌಡ (ಸುಬ್ಬು) ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Subrahmanya of Byndoor taluk in Udupi district is a good example of how rural sports talents, if properly encouraged, can bring glory to their hometown, state and country.
ಸುಬ್ರಹ್ಮಣ್ಯ ಗೌಡ ಅವರು ಗೆದ್ದಿರುವ ಕಂಚಿನ ಪದಕ ಪಂಜಾಬ್ ವಿಶ್ವವಿದ್ಯಾನಿಲಯದ ಪದಕಗಳ ಪಟ್ಟಿಗೆ ಸೇರಿದಾಗ ಅಚ್ಚರಿಯಾಯಿತು. ವಿಚಾರಿಸಿದಾಗ ಅವರು ಪ್ರತಿನಿಧಿಸುತ್ತಿರುವುದು ಪಂಜಾಬ್ ವಿಶ್ವವಿದ್ಯಾನಿಲಯ ಎಂಬುದು ಸ್ಪಷ್ಟವಾಯಿತು. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಪಂಜಾಬ್ನ ಗುರುಗೋವಿಂದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಕಾರಣ ಸುಬ್ರಹ್ಮಣ್ಯ ಅವರ ಪದಕ ಪಂಜಾಬ್ ವಿಶ್ವವಿದ್ಯಾನಿಲಯದ ಪಟ್ಟಿಗೆ ಸೇರಿದೆ.

ಕೊಲ್ಲೂರು ಶ್ರೀ ಮುಕಾಂಬಿಕಾ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಸುಬ್ರಹ್ಮಣ್ಯ ಅವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ್ದು ಎಳಜಿತ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ. ಉತ್ತಮ ಮೈಕಟ್ಟು ಹೊಂದಿರುವ ಸುಬ್ಬು ಪ್ರತಿಯೊಂದು ಕ್ರೀಡೆಯಲ್ಲೂ ಚಾಂಪಿಯನ್ ಪಟ್ಟ ಗೆಲ್ಲುತ್ತಿದ್ದರು. ಈಗ ವೇಟ್ಲಿಫ್ಟಿಂಗ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರೂ ಈ ಹಿಂದೆ ನೆಟ್ಬಾಲ್ನಲ್ಲಿ ರಾಷ್ಟ್ರೀಯ ಆಟಗಾರ, ವಾಲಿಬಾಲ್ನಲ್ಲಿ ರಾಜ್ಯ ಮಟ್ಟದ ಆಟಗಾರ, ಅಥ್ಲೆಟಿಕ್ಸ್ನಲ್ಲಿ ಚಿನ್ನದ ಭೇಟೆಗಾರ, ಕಬಡ್ಡಿಯಲ್ಲಿ ಚಾಂಪಿಯನ್, ರಾಜ್ಯ ಮಟ್ಟದ ಕುಸ್ತಿಪಟು ಹೀಗೆ ಪ್ರತಿಯೊಂದು ಕ್ರೀಡೆಯಲ್ಲೂ ಚಾಂಪಿಯನ್ ಎನಿಸಿರುವ ಸಬ್ರಹ್ಮಣ್ಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸೇರಿದ ನಂತರ ವೇಟ್ಲಿಫ್ಟಿಂಗ್ನಲ್ಲಿ ಮಿಂಚತೊಡಗಿದರು.

ಕೊಲ್ಲೂರು ಶ್ರೀ ಮುಕಾಂಬಿಕಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿ ದೈಹಿಕ ಶಿಕ್ಷಕರಾದ ಸಚಿನ್ ಹಾಗೂ ಸುಖೇಶ್ ಅವರ ಪ್ರೋತ್ಸಾಹ ಹಾಗೂ ಮಂಜುನಾಥ್ ಹಾಗೂ ಕಾಮನ್ವೆಲ್ತ್ ಪದಕ ವಿಜೇತ ಗುರುರಾಜ್ ಅವರ ಸ್ಫೂರ್ತಿಯಿಂದ ವೇಟ್ಲಿಫ್ಟಿಂಗ್ನಲ್ಲಿ ಮುಂದುವರಿಯುವಂತಾಯಿತು.
ಆರ್ಥಿಕ ನೆರವಿನಿ ಅಗತ್ಯವಿದೆ: 2019ರಲ್ಲಿ ವೃತ್ತಿಪರ ವೇಟ್ಲಿಫ್ಟಿಂಗ್ಗೆ ಕಾಲಿಟ್ಟ ಸುಬ್ರಹ್ಮಣ್ಯ ಎಸ್ಡಿಎಂ ಕಾಲೇಜನ್ನು ಪ್ರತಿನಿಧಿಸಿ ಜೂನಿಯರ್ ವಿಭಾಗದಲ್ಲಿ ಚಿನ್ನ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚು ಗೆದ್ದರು. ರಾಜ್ಯ ಮಟ್ಟದಲ್ಲಿ 8 ಚಿನ್ನ, 2 ಬೆಳ್ಳಿ ಗೆದ್ದಿರುವ ಸುಬ್ಬು, ಜೂನಿಯರ್ ವಿಭಾಗಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ. ದಕ್ಷಿಣ ವಲಯ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಯದ ಪರ ಬೆಳ್ಳಿ ಪದಕ ಗೆದ್ದಿದ್ದಾರೆ. ಹಲವು ಬಾರಿ ನ್ಯಾಷನಲ್ ವಿಭಾಗದಲ್ಲಿ ಸ್ಪರ್ಧಿಸಿರುವ ಸುಬ್ರಹ್ಮಣ್ಯ ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಸ್ಥಳೀಯ ಉದ್ಯಮಿ ಸುರೇಶ್ ಶೆಟ್ಟಿ ಅವರು ಸುಬ್ರಹ್ಮಣ್ಯ ಅವರಿಗೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಹಲವು ಬಾರಿ ನೆರವಾಗಿರುವುದನ್ನು ಸ್ಮರಿಸುತ್ತಾರೆ.

ಪಂಜಾಬ್ ವಿವಿಯನ್ನು ಪ್ರತಿನಿಧಿಸುತ್ತಿರುವುದು ಏಕೇ?: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪುಟ್ಟ ಗ್ರಾಮದ ಕ್ರೀಡಾಪಟುವೊಬ್ಬರು ದೂರದ ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಗುರುಗೋವಿಂದ್ ಕಾಲೇಜನ್ನು ಪ್ರತಿನಿಧಿಸುತ್ತಿರುವುದು ಯಾಕೆ ಎಂಬ ಪಶ್ನೆ ಉದ್ಭವಿಸುವುದು ಸಹಜ. ಈಗಾಗಲೇ ಎಂಎಸ್ಡಬ್ಲ್ಯುನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುವ ಸುಬ್ರಹ್ಮಣ್ಯಗೆ ಇನ್ನೂ ಹೆಚ್ಚಿನ ಕ್ರೀಡಾ ಸಾಧನೆ ಮಾಡಲು ಗುರುಗೋವಿಂದ ಕಾಲೇಜು ಪ್ರೋತ್ಸಾಹ ನೀಡಿದೆ. ಇಲ್ಲಿ ಅತಿಥಿ ಪ್ರವೇಶಾತಿಯನ್ನು ಪಡೆದಿರುತ್ತಾರೆ. ಇಲ್ಲಿ ಎಲ್ಲ ಸೌಲಭ್ಯಗಳೂ ಉಚಿತವಾಗಿ ಸಿಗುತ್ತವೆ. ವಸತಿ, ಉತ್ತಮ ತರಬೇತಿ, ಉತ್ತಮ ಕೋಚ್, ಸಾರಿಗೆ ಭತ್ಯೆ, ಗಾಯಗೊಂಡರೆ ವೆಚ್ಚವನ್ನು ಭರಿಸಲಾಗುತ್ತದೆ, ಈ ಎಲ್ಲ ಕಾರಣಗಳಿಗಾಗಿ ಸುಬ್ರಹ್ಮಣ್ಯ ದೂರದ ಪಂಜಾಬ್ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿದ್ದಾರೆ.
ಬಡತನದ ಕಾರಣ ಕ್ರೀಡೆ ತೊರೆದ ಅಣ್ಣ!
ಕೂಲಿ ಮಾಡಿ ಬದುಕುತ್ತಿದ್ದ ಬಾಬು ಗೌಡ ಹಾಗೂ ಸೀತು ಗೌಡ ದಂಪತಿಯ ಕಿರಿಯ ಮಗ ಸುಬ್ರಹ್ಮಣ್ಯ. ಬಾಬು ಗೌಡ ಅವರು ತೀರಿಕೊಂಡ ಬಳಿಕ ಬದುಕು ಕಷ್ಟವಾಯಿತು. ಹಿರಿಯ ಮಗ ಸುಧಾರಕ ರಾಜ್ಯ ಕಂಡ ಉತ್ತಮ ಕ್ರಾಸ್ ಕಂಟ್ರಿ ಓಟಗಾರ. ಆದರೆ ಧರಿಸಲು ಶೂ ಇಲ್ಲದೆ ಕ್ರೀಡೆಯಿಂದ ಹಿಂದೆ ಸರಿದ.

“ನಮ್ಮದು ಬಡ ಕುಟುಂಬ. ಕೂಲಿ ಮಾಡಿ ಬದುಕುವುದು. ಈಗ ಅಣ್ಣಂದಿರು ದುಡಿಯುತ್ತಾರೆ. ಅವರಿಗೂ ಸಂಸಾರ ಇದೆ. ಅಣ್ಣ ಉತ್ತಮ ಓಟಗಾರ, ಧರಿಸಲು ಶೂ ಇಲ್ಲದೆ ಬೇಸತ್ತು ಕ್ರೀಡೆಯಿಂದಲೇ ದೂರವಾದ. ಈಗ ನಾನು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವೆ. ಯಾವುದಾರೂ ಉದ್ಯೋಗ ಪಡೆದು ಸಂಸಾರಕ್ಕೆ ನೆರವಾಗಬೇಕೆಂಬ ಹಂಬಲ. ಅದಕ್ಕೆ ಮೊದಲು ಅಂತಾರಾಷ್ಟ್ರೀ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲಬೇಕೆಂಬ ಉತ್ಕಟ ಆಸೆ ಇದೆ. ಅದಕ್ಕಾಗಿ ಶ್ರಮವಹಿಸುತ್ತಿರುವೆ,” ಎಂಬ ಸುಬ್ರಹ್ಮಣ್ಯ ಅವರ ಮಾತಿನಲ್ಲಿ ಈ ದೇಶದ ಗ್ರಾಮೀಣ ಪ್ರತಿಭೆಗಳ ಬದುಕು ಅನಾವರಣಗೊಳ್ಳುತ್ತದೆ.
.

