ರಾಷ್ಟ್ರೀಯ ಜೂ. ಖೋ ಖೋ ಕರ್ನಾಟಕ ಬಾಲಕರ ಚಾಂಪಿಯನ್
ಬೆಂಗಳೂರು: ಹಾಲಿ ಚಾಂಪಿಯನ್ ಮಹಾರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ 35-30 ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ 44ನೇ ರಾಷ್ಟ್ರೀಯ ಜೂನಿಯರ್ ಖೋ ಖೋ ಚಾಂಪಿಯನ್ಷಿಪ್ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ತಂಡ ಒಡಿಶಾ ವಿರುದ್ಧ 34-33 ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka claimed the boys’ title in the 44th Junior National Kho Kho Championship with a thrilling victory over defending champions Maharashtra in the final
ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಕೋಲಾಪುರ ವಿರುದ್ಧ 33-31 ಅಂತರದಲ್ಲಿ ಜಯ ಗಳಿಸಿದರೆ, ಕರ್ನಾಟಕ ತಂಡ ಮಧ್ಯಪ್ರದೇಶದ ವಿರುದ್ಧ 33-20 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಕರ್ನಾಟಕದ ಬಿ ವಿಜಯ್ ಬಾಲಕರ ವಿಭಾಗಲ್ಲಿ ಶ್ರೇಷ್ಠ ಆಟಗಾರನೆನಿಸಿ ವೀರ ಅಭಿಮನ್ಯು ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸ್ನೇಹ ಲಮ್ಕಾನೆ ಜಾನ್ಕಿ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕದ ಪ್ರಜ್ವಲ್ ವೈ ಬಾಲಕರ ವಿಭಾಗದಲ್ಲಿ ಉತ್ತಮ ಡಿಫೆಂಡರ್ ಹಾಗೂ ಮಹಾರಾಷ್ಟ್ರದ ರಾಜ್ ಜಾಧವ್ ಉತ್ತಮ ಅಟ್ಯಾಕರ್, ಅರ್ಚನಾ ಪ್ರಧಾನ್ ಬಾಲಕಿಯರ ವಿಭಾಗದ ಉತ್ತಮ ಡಿಫೆಂಡರ್ ಹಾಗೂ ಮಹಾರಾಷ್ಟ್ರದ ದೀಕ್ಷಾ ಕಾಟೆಕರ್ ಉತ್ತಮ ಅಟ್ಯಾಕರ್ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕ ಖೋ ಖೋ ಅಸೋಸಿಯೇಷನ್ನ ಅಧ್ಯಕ್ಷ ಲೋಕೇಶ್ವರ್ ಅವರ ಜವಾಬ್ದಾರಿಯಲ್ಲಿ ನಡೆದ ಚಾಂಪಿಯನ್ಷಿಪ್ ಯಶಸ್ವಿಯಾಗಿ ನಡೆಯಿತು. “ರಾಷ್ಟ್ರೀಯ ಚಾಂಪಿಯನ್ಷಿಪ್ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ಸಂಗತಿ. ಪಾಲ್ಗೊಂಡಿರುವ ತಂಡಗಳು, ಆಟಗಾರರು ಮತ್ತು ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ಟೂರ್ನಿ ಸುವ್ಯವಸ್ಥಿತವಾಗಿ ನಡೆದಿರುವುದು ಗ್ರಾಮೀಣ ಕ್ರೀಡೆಗೆ ಸಿಕ್ಕ ಪ್ರೋತ್ಸಾಹ,” ಎಂದು ಲೋಕೇಶ್ವರ್ ಹೇಳಿದ್ದಾರೆ.

