ಕ್ರಿಕೆಟ್ ಬಿಟ್ಟು ಫುಟ್ಬಾಲ್ ತಂಡ ಕಟ್ಟಿ ಭಾರತ ಪರ ಆಡಿದ ವನಿತೆಯರು!
ಉಡುಪಿ: ಭಾರತದ ಮಹಿಳಾ ಫುಟ್ಬಾಲ್ ಸಂಸ್ಥೆ ಹುಟ್ಟಿ 50 ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಫುಟ್ಬಾಲ್‌ನ ಕತೆಯನ್ನು ಕೇಳಿದಾಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂತು. ಕ್ರಿಕೆಟ್ ಆಡುತ್ತಿದ್ದ ಹೆಣ್ಣು ಮಕ್ಕಳೆಲ್ಲ ಫುಟ್ಬಾಲ್ ಆಟವಾಡಿ, ಅದರಲ್ಲಿ ಐವರು ಆಟಗಾರರ್ತಿಯರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾರೆ. Karnataka girls left the cricket and started playing football and represented India in Internationals.
ಬೆಂಗಳೂರಿನ ಉಪ್ಪಾರ್ ಪೇಟೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಒಂದು ಪುಟ್ಟ ಕ್ರೀಡಾಂಗಣವಿದೆ. ಅಲ್ಲೊಂದು ಕ್ರಿಕೆಟ್ ಕ್ಲಬ್ ಇದ್ದಿತ್ತು. ಹೆಸರು ಪದ್ಮಾ ಸೋಷಿಯಲ್ ಕ್ಲಬ್. ಇಲ್ಲಿ ಹೆಚ್ಚಾಗಿ ಕ್ರಿಕೆಟ್ ಹಾಗೂ ವಾಲಿಬಾಲ್ ಆಡುತ್ತಿದ್ದರು. ಕ್ರಿಕೆಟ್ ಜೊತೆಯಲ್ಲಿ ಫುಟ್ಬಾಲ್‌ಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೆಲವು ಯುವತಿಯರಿಗೆ ಫುಟ್ಬಾಲ್ ಆಡಲು ಅವಕಾಶ ನೀಡಲಾಯಿತು. ಕ್ರಿಕೆಟ್ ಜೊತೆಯಲ್ಲಿ ಫುಟ್ಬಾಲ್ ಮತ್ತು ವಾಲಿಬಾಲ್ ಆಟವನ್ನೂ ಆಡಡಲಾರಂಭಿಸಿದರು. ಕೆಲವರು ಕ್ರಿಕೆಟ್‌ನಲ್ಲಿ ಮಿಂಚಿದರೆ ಇನ್ನು ಕೆಲವರು ಫುಟ್ಬಾಲ್‌ನಲ್ಲಿ ಮಿಂಚಿದರು. ಕ್ರಿಕೆಟ್‌ನಲ್ಲಿ ರಾಜ್ಯಮಟ್ಟದಲ್ಲೂ ಆಡಿದರು. ಫುಟ್ಬಾಲ್‌ಗೆ ಪ್ರೋತ್ಸಾಹ ನೀಡಿದುದರ ಪರಿಣಾಮ ಪದ್ಮಾ ಸೋಷಿಯಲ್ ಕ್ಲಬ್‌ನಲ್ಲಿ ವನಿತೆಯರ ಫುಟ್ಬಾಲ್ ತಂಡ ಹುಟ್ಟಿಕೊಂಡಿತು. ಇವರ ಅದೃಷ್ಟಕ್ಕೆ 1975ರಲ್ಲಿ ಭಾರತ ಮಹಿಳಾ ಫುಟ್ಬಾಲ್ ಸಂಸ್ಥೆ ಸ್ಥಾಪನೆಯಾಯಿತು. ಪದ್ಮಾ ಸೋಷಿಯಲ್ ಕ್ಲಬ್‌ನ ಫುಟ್ಬಾಲ್ ತಂಡದಲ್ಲಿ ಆಡಿದ ಹಲವು ಆಟಗಾರ್ತಿಯರು ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಆಡಿದ್ದು ವಿಶೇಷ.

ಚಿತ್ರಾ ಗಂದಾಧರ್, ಭಾರತಿ, ಗಾಯತ್ರಿ ಪೊನ್ನಪ್ಪ, ಬೃಂದಾ, ಗೀತಾ ರಾವ್ ಹಾಗೂ ಕಲ್ಪನಾ ಹೆರಂಜಾಲ್ ಇವರು ಕರ್ನಾಟದಲ್ಲಿ ಆಡಿ ಆನಂತರ ಭಾರತ ತಂಡವನ್ನು ಪ್ರತಿನಿಧಿಸಿದವರು. ಚಿತ್ರಾ ಅವರ ಪತಿ ಕಮಲ್ ಕೂಡ ಫುಟ್ಬಾಲ್ ಆಟಗಾರರು. ಇಬ್ಬರು ಹೆಣ್ಣು ಮಕ್ಕಳು ಕೂಡ ಫುಟ್ಬಾಲ್ ತಾರೆಯರು ಎಂಬುದು ವಿಶೇಷ. ಅಮೂಲ್ಯ ಕಮಲ್ ಅವರು ಒಲಿಂಪಿಕ್ ಪೂರ್ವ, ವಿಶ್ವಕಪ್ ಪೂರ್ವ ಪಂದ್ಯಗಳನ್ನು ಆಡಿದ್ದು ಮಾತ್ರವಲ್ಲ, ಏಷ್ಯನ್ ಚಾಂಪಿಯನ್‌ಷಿಪ್ ಕ್ವಾಲಿಫಯರ್, ಏಷ್ಯನ್ ಗೇಮ್ಸ್ 2014 ಪಂದ್ಯಗಳನ್ನು ಆಡಿದ್ದು, ಸ್ಯಾಫ್ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಅಮೂಲ್ಯ ಕಮಲ್ ಅವರ ಸಾಧನೆಗೆ ಕರ್ನಾಟಕ ಸರಕಾರ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆರಂಭದಿಂದಲೂ ಮಹಿಳಾ ಫುಟ್ಬಾಲ್‌ಗೆ ಪ್ರೋತ್ಸಾಹ ನೀಡುವಲ್ಲಿ ವಿಫಲವಾಗಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಈ ಬಗ್ಗೆ ಒಂದು ಕಾರ್ಯಕ್ರಮ ಮಾಡುವ ಯೋಚನೆ ಮಾಡಲಿಲ್ಲ. ಮಹಿಳಾ ಫುಟ್ಬಾಲ್ ಕೇವಲ ಶಾಸ್ತ್ರಕ್ಕೆ ಇದ್ದಂತಿದೆ. ಈ ದೇಶದ ಮಹಿಳಾ ತಂಡ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಾಗ ಪ್ರಾಯೋಜಕತ್ವ ನೀಡಿದ್ದು ಜರ್ಮನಿ ಫುಟ್ಬಾಲ್ ಸಂಸ್ಥೆ ಎಂಬುದನ್ನು ನೆನಪಿಸಿಕೊಂಡಾಗ ನಮ್ಮ ದೇಶದಲ್ಲಿ ಫುಟ್ಬಾಲ್‌ಗೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 1981-83ರಲ್ಲಿ ಚಿತ್ರಾ ಗಂಗಾಧರ್ ಅವರ ಜೊತೆಯಲ್ಲಿ ಉಮಾ ಕಿಟ್ಟು, ಮೇರಿ ವಿಕ್ಟೋರಿಯಾ, ಉಷಾ, ಇರುದಯಾ ಮೇರಿ, ಲಲಿತ ರತ್ನ ಹಾಗೂ ಸಂಧ್ಯಾ ಭಾರತದ ಪರ ಆಡಿದರು. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರೆಹೆನಾ ಜಾಕೋಬ್, ಯಶಿಕಾ, ರವಿಕಾ ರಾಮ್ಜಿ, ಪದ್ಮಪ್ರಿಯಾ, ಮೇರಿ ಮಾರ್ಗರೆಟ್ ಹಾಗೂ ತಾರಾ ರಾಮಚಂದ್ರನ್ ಸೇರಿದಂತೆ ಹಲವಾರು ಆಟಗಾರ್ತಿಯರು ಭಾರತದ ಪರ ಆಡಿದ್ದಾರೆ. ಈ ವರ್ಷ ಭಾರತ ಮಹಿಳಾ ಫುಟ್ಬಾಲ್‌ಗೆ ಸುವರ್ಣ ಸಂಭ್ರಮ.

