ಬಾಲ್ ಬಾಯ್ಗೂ ಅನರ್ಹ ಅಂದ್ರು, ಆತ 2 ಗ್ರ್ಯಾನ್ ಸ್ಲಾಮ್ನ್ನೇ ಗೆದ್ದ!
ಕ್ರೀಡಾ ಜಗತ್ತಿನ ಸ್ಪೂರ್ತಿಯ ಕತೆಗಳನ್ನು ಓದುತ್ತಿರಬೇಕಾದರೆ ಸ್ಟ್ಯಾನ್ ಸ್ಮಿತ್ ಯಾನೆ ಸ್ಟ್ಯಾನ್ಲೀ ರೋಜರ್ ಸ್ಮಿತ್ ಅವರ ಬದುಕಿನ ಕತೆ ಎಂಥವರಲ್ಲೂ ಸ್ಪೂರ್ತಿ ತುಂಬುವಂಥದ್ದು. ಡೇವಿಸ್ ಕಪ್ನಲ್ಲಿ ಆಟಗಾರರು ಹೊಡೆದ ಚೆಂಡನ್ನು ಆಯ್ದು ಕೊಡಲು ಬಾಲ್ ಬಾಯ್ ಆಗಲು ಅವಕಾಶ ಕೇಳಿದ ಹುಡುಗನಿಗೆ “ನಿನ್ನ ದೇಹ ಅದಕ್ಕೆ ಸೂಕ್ತವಾಗಿಲ್ಲ, ನೀನು ದಡೂತಿಯಾಗಿದ್ದಿ. ನೀನು ಬಾಲ್ ಬಾಯ್ ಆಗಲಿಕ್ಕೆ ಅನರ್ಹ” ಎಂದು ಸಂಘಟಕರು ಹೇಳಿದಾಗ ಆತ ಬೇರೆ ಮಾತನಾಡದೆ ಅಲ್ಲಿಂದ ಹೊರಟು ಹೋದ, ಕೊನೆಗೆ ಇತರರು ಆತ ಹೊಡೆದ ಚೆಂಡನ್ನು ಆಯ್ದರು, ಆತ ಎಂಟು ಬಾರಿ ಡೇವಿಸ್ ಕಪ್ ಗೆಲ್ಲುತ್ತಾನೆ ಮಾತ್ರವಲ್ಲ, ಟೆನಿಸ್ ಜಗತ್ತಿನ ಎರರಡು ಶ್ರೇಷ್ಠ ಗ್ಯಾನ್ಸ್ಲ್ಯಾಮ್ಗಳನ್ನೂ ಗೆಲ್ಲುತ್ತಾನೆ. ಅಮೆರಿಕದ ಮಾಜಿ ನಂಬರ್ 1 ಟೆನಿಸ್ ತಾರೆ ಸ್ಟ್ಯಾನ್ ಸ್ಮಿತ್ ಅವರ ಬದುಕಿನ ಕತೆ ಎಂಥವರಲ್ಲೂ ಸ್ಫೂರ್ತಿಯನ್ನು ತುಂಬಿಸುತ್ತದೆ. Once rejected to be a ball boy for being clumsy Stan Smith went on to become a successful Tennis star.
ಅಮೆರಿಕದ ಕ್ಯಾಲಿಫೋರ್ನಿಯಾದ ಪಸಾಡೆನಾದ ನಿವಾಸಿ ಸ್ಟ್ಯಾನ್ ಸ್ಮಿತ್ ಚಿಕ್ಕಂದಿನಲ್ಲಾದ ಅವಮಾನದಿಂದಾಗಿ ಟೆನಿಸ್ನಿಂದ ಹಿಂಜರಿಯಲಿಲ್ಲ. ಉತ್ತಮ ತರಬೇತುದಾರರಲ್ಲಿ ತರಬೇತಿ ಪಡೆದ ಮೂರು ಬಾರಿ ಅಮೆರಿಕದ ಚಾಂಪಿಯನ್ ಪಟ್ಟ ಗೆದ್ದ. ಅಮೆರಿಕದ ಇನ್ನೋರ್ವ ಟೆನಿಸ್ ತಾರೆ ಬಾಬ್ ಲಟ್ಜ್ ಅವರೊಂದಿಗೆ ಸೇರಿ ಡಬಲ್ಸ್ ಆಟದಲ್ಲೂ ಉತ್ತಮವಾಗಿ ಪಳಗಿದ.
1946ರಲ್ಲಿ ಜನಿಸಿದ ಸ್ಟ್ಯಾನ್ ಸ್ಮಿತ್ 1969ರಲ್ಲಿ ವೃತ್ತಿಪರ ಟೆನಿಸ್ ಆಟಗಾರನಾಗಿ ಹೊರಹೊಮ್ಮಿದ. 1971ರಲ್ಲಿ ಯುಎಸ್ ಓಪವ್ ಟೆನಿಸ್ ಚಾಂಪಿಯನ್ಷಿಪ್ ಹಾಗೂ 1972ರಲ್ಲಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಪಟ್ಟ, 19070ರಲ್ಲಿ ಆಸ್ಟ್ರೇಲಿಯಾ ಓಪನ್ ಡಬಲ್ಸ್ ಚಾಂಪಿಯನ್ ಪಟ್ಟ ಹಾಗೂ ನಾಲ್ಕು ಬಾರಿ ಯುಎಸ್ ಓಪನ್ ಡಬಲ್ಸ್ನಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಟೆನಿಸ್ ವೃತ್ತಿ ಬದುಕಿನಲ್ಲಿ 64 ಸಿಂಗಲ್ಸ್ ಪ್ರಶಸ್ತಿ ಹಾಗೂ 54 ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ಸ್ಟ್ಯಾನ್ ಸ್ಮಿತ್ 1985ರಲ್ಲಿ ಟೆನಿಸ್ ಕ್ರೀಡೆಯಿಂದ ನಿವೃತ್ತಿ ಹೊಂದುತ್ತಾರೆ.
ಅಡಿಡಾಸ್ ಸ್ಟ್ಯಾನ್ಸ್ಮಿತ್ ಶೂ: ಜಗತ್ತಿನ ಶ್ರೇಷ್ಠ ಶೂ ಬ್ರಾಂಡ್ ಆಗಿರುವ ಅಡಿಡಾಸ್ 1978ರಲ್ಲಿ ಸ್ಟ್ಯಾನ್ ಸ್ಮಿತ್ ಬ್ರಾಂಡ್ನಲ್ಲಿ ಟೆನಿಸ್ ಶೂಗಳನ್ನು ಮಾರುಕಟ್ಟೆಗೆ ತಂದಿತು. ಆಧುನಿಕ ಟೆನಿಸ್ನಲ್ಲಿ ಈ ಬ್ರಾಂಡ್ನ ಶೂಗಳಿಗೆ ಮಾನ್ಯತೆ ಸಿಗಲಿಲ್ಲ. ಅಂಗಣದಲ್ಲಿ ಆಡಲು ಅವಕಾಶ ನೀಡದಿದ್ದರೇನಂತೆ ಅಡಿಡಾಸ್ ಸ್ಟ್ಯಾನ್ ಸ್ಮಿತ್ ಶೂ ಈಗಲೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಟವಾಡದವರೂ ಬಳಸುತ್ತಿದ್ದಾರೆ.