ದಿನೇಶ್ ಕಾರ್ತಿಕ್ ವಿನ್ನಿಂಗ್ ಸಿಕ್ಸರ್ ನೋಡಿಲ್ಲ ಪತ್ನಿ ದೀಪಿಕಾ ಪಳ್ಳಿಕಲ್… ಕಾರಣ ಗೊತ್ತಾ?
ಬೆಂಗಳೂರು: ಶ್ರೀಲಂಕಾದಲ್ಲಿ ಕಳೆದ ಭಾನುವಾರ ನಡೆದ ತ್ರಿಕೋನ ಟಿ20 ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದು ಗೊತ್ತೇ ಇದೆ. ಲೇಟೆಸ್ಟ್ ನ್ಯೂಸ್ ಏನೆಂದರೆ ಪತಿಯ ಆ ಸಿಕ್ಸರ್ ಸಾಹಸವನ್ನು ಪತ್ನಿ ದೀಪಿಕಾ ಪಳ್ಳಿಕಲ್ ನೋಡಿಯೇ ಇಲ್ಲವಂತೆ!.

ತಾವು ಸಿಕ್ಸರ್ ಸಿಡಿಸಿ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಕ್ಷಣವನ್ನು ತಮ್ಮ ಪತ್ನಿ ಹಾಗೂ ದೇಶದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ನೋಡಿಯೇ ಇಲ್ಲ ಎಂದು ಸ್ವತಃ ದಿನೇಶ್ ಕಾರ್ತಿಕ್ ಅವರೇ ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ.

ನನ್ನ ಹೆಂಡತಿ ಕ್ರಿಕೆಟ್ ನಾನು ಕ್ರಿಕೆಟ್ ಆಡುತ್ತಿದ್ದಾಗ ಆ ಪಂದ್ಯಗಳನ್ನು ವೀಕ್ಷಿಸುವುದೇ ಇಲ್ಲ. ಯಾಕಂದ್ರೆ ಆಗ ಆಕೆ ತುಂಬಾ ನರ್ವಸ್ ಆಗ್ತಾಳೆ. ನಾನು ಸಿಕ್ಸರ್ ಬಾರಿಸಿದ ಕ್ಷಣವನ್ನು ಅವಳ ಸಹೋದರಿಯರು ವೀಕ್ಷಿಸಿದ್ದರು. ಕ್ರಿಕೆಟ್ ದೀಪಿಕಾಳ ಫೇವರಿಟ್ ಕ್ರೀಡೆ ಅಲ್ಲ. ಟಿವಿಯಲ್ಲಿ ಸ್ಕ್ವಾಷ್ ಬಂದಾಗಲೆಲ್ಲಾ ಅವಳು ಕುಳಿತು ನೋಡುತ್ತಾಳೆ. ಕ್ರಿಕೆಟ್ ಬಗ್ಗೆ ಆಕೆಗೆ ಹೆಚ್ಚಿನ ಆಸಕ್ತಿಯೇ ಇಲ್ಲ.
– ದಿನೇಶ್ ಕಾರ್ತಿಕ್, ಭಾರತ ಕ್ರಿಕೆಟ್ ತಂಡದ ಆಟಗಾರ.
ಶ್ರೀಲಂಕಾದ ಕೊಲಂಬೊದಲ್ಲಿ ಮಾರ್ಚ್ 18ರಂದು ನಡೆದ ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲು ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿತ್ತು. ಸೌಮ್ಯ ಸರ್ಕಾರ್ ಎಸೆದ ಕೊನೆಯ ಓವರ್‌ನ ಅಂತಿಮ ಎಸೆತವನ್ನು ಸಿಕ್ಸರ್‌ಗಟ್ಟಿದ್ದ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು. ಆ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿ ತಂಡದ ಜಯದ ರೂವಾರಿಯಾಗಿ ಮೂಡಿ ಬಂದಿದ್ದರು. ಕಾರ್ತಿಕ್ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದಿತ್ತು.
ಇದೀಗ ಐಪಿಎಲ್‌ಗೆ ಸಜ್ಜಾಗುತ್ತಿರುವ ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.