ಬೆಂಗಳೂರು: ಗುರುವಾರ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಅಭಿಮಾನಿಗಳು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಾವು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಭಾರತ ತಂಡ ಹಾಗೂ ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನಿಲ್ ಛೆಟ್ರಿ ಅವರಿಗೆ ಉಡುಗೊರೆಯಾಗಿ ನೀಡಿದರು. 10 and 11 exchanged but both are Golden boys of Indian sports.
“ಗುರುವಾರ ಎಲ್ಲರೂ ಕ್ರೀಡಾಂಗಣಕ್ಕೆ ಬನ್ನಿ” ಎಂದು ಕನ್ನಡದಲ್ಲೇ ಸಂದೇಶ ನೀಡಿದ್ದ ಒಲಿಂಪಿಯನ್ ನೀರಜ್ ಚೋಪ್ರಾ ಅವರು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಪಂಜಾಬ್ ಎಫ್‌ಸಿ ನಡುವಿನ ಪಂದ್ಯವನ್ನು ವೀಕ್ಷಿಸಿದರು. ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡು ಇತ್ತಂಡಗಳು ಅಂಕ ಹಂಚಿಕೊಂಡವು. ಫಲಿತಾಂಶ ಏನೇ ಇದ್ದರೂ ಗುರುವಾರದ ಪಂದ್ಯ ಮಾತ್ರ ಫುಟ್ಬಾಲ್ ಅಭಿಮಾನಿಗಳ ಮನ ತಣಿಸಿತ್ತು. ಬೆಂಗಳೂರು ಗೆಲ್ಲಲಿಲ್ಲ ಎಂಬುದೇ ನೋವಿನ ಸಂಗತಿ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣಕ್ಕೆ ಮುತ್ತಿಟ್ಟು, ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಬಾರಿಗೆ ಚಿನ್ನ ಗೆದ್ದ ನೀರಜ್ ಚೋಪ್ರಾ ಪಂದ್ಯವನ್ನು ವೀಕ್ಷಿಸಿದ್ದು ವಿಶೇಷ ಸಂಗತಿ. ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನೀರಜ್ ಬೆಂಗಳೂರು ತಂಡವನ್ನು ಹುರಿದುಂಬಿಸುತ್ತಿದ್ದರು. ಪಂದ್ಯ ಮುಗಿದ ನಂತರ ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ನಂಬರ್ 10 ಜೆರ್ಸಿಯನ್ನು ನೀರಜ್ ಚೋಪ್ರಾಗೆ ಉಡುಗೊರೆಯಾಗಿ ನೀಡಿದರು. ಅದಕ್ಕೆ ಪ್ರತಿಯಾಗಿ ನೀರಜ್ ಚೋಪ್ರಾ ತಾವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸುವಾಗ ಧರಿಸಿದ್ದ ತಿಳಿ ನೀಲಿ ಬಣ್ಣದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.