Tuesday, March 19, 2024

ಸಾವನ್ನೇ ಗೆದ್ದ ವಿಶ್ವಗೆ ಚಿನ್ನ ಗೆಲ್ಲೋದು ಕಷ್ಟವೇ ?

ಸೋಮಶೇಖರ್ ಪಡುಕರೆ:

ಆ ಚಾಂಪಿಯನ್ ಪವರ್‌ಲಿಫ್ಟರ್ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದರು. ಮಂಗಳೂರಿನ ಹೊರವಲಯ ಬೈಕಂಪಾಡಿಯಲ್ಲಿ ಬಸ್ಸು ಚಲಿಸುತ್ತಿರುವಾಗ ಕ್ರೇನ್‌ನ ಮುಂಭಾಗ ಬಸ್ಸಿಗೆ ಬಡಿದ ಪರಿಣಾಮ ಬಸ್ಸಿನಲ್ಲಿದ್ದ ಆ ಯುವಕನಿಗೆ ಗಂಭೀರ ಗಾಯವಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ದೂರವಾಣಿ ಮೂಲಕ ಕ್ಷೇಮ ವಿಚಾರಿಸಿದಾಗ ಅವರ ಗೆಳೆಯರಿಂದ ಡಾಕ್ಟರು ಜೀವಕ್ಕೆ ಅಪಾಯವಿದೆ ಎಂದಿದ್ದಾರೆ, ಎಂಬ ಆಘಾತಕಾರಿ ಮಾಹಿತಿ. ಕಿವಿ ಕೇಳಿಸವುದೇ ಇಲ್ಲ, ಕ್ರೀಡೆಯಲ್ಲಿ ಮುಂದುವರಿಯುವುದಂತು ಸಾಧ್ಯವೇ ಇಲ್ಲ ಎಂದಿದ್ದಾರೆ. ಇದು ಚಾಂಪಿಯನ್ ಪವರ್‌ಲಿಫ್ಟರ್ ನ ಆತ್ಮಬಲವನ್ನೇ ಕಸಿದುಕೊಂಡಿತು. ಆದರೆ ಚಾಂಪಿಯನ್ ಕ್ರೀಡಾಪಟುವಿಗೆ ಹಾಗಾಗಲಿಲ್ಲ. ಮೂರೇ ತಿಂಗಳಲ್ಲಿ ಚೇತರಿಸಿಕೊಂಡು ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದ. ಆತ ಬೇರೆ ಯಾರೂ ಅಲ್ಲ. ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ನಮ್ಮ ಕುಂದಾಪುರದ ಸಾಧಕ ವಿಶ್ವನಾಥ್ ಭಾಸ್ಕರ ಗಾಣಿಗ.

                                                   ಆತ್ಮವಿಶ್ವಾಸ ಗೆಲ್ಲಿಸಿತು
ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಹೇಳಿಕೆ ಪ್ರಕಾರ ನಾನು ಸತ್ತೇ ಹೋಗಿದ್ದೆ. ಕಿವಿಗೆ ಪೆಟ್ಟಾಗಿರುವುದು ಸಹಜ, ಆದರೆ ಮೆದುಳಿಗೆ ಪೆಟ್ಟಾಗಿದೆ ಎಂಬ ವರದಿ ನೀಡಿದರು. ಬೆಂಗಳೂರಿಗೆ ಬಂದು ಬೇರೆ ವೈದ್ಯರಲ್ಲಿ ಚಿಕಿತ್ಸೆ ಮುಂದುವರಿಸಿದೆ. ಕ್ರೀಡೆಯಿಂದ ಸ್ಪಲ್ಪ ಸಮಯ ದೂರ ಇರಿ ಏನೂ ಆಗೊಲ್ಲ ಅಂದರು. ನೋವಿನ ನಡುವೆಯೂ ಅಭ್ಯಾಸವನ್ನು ಮುಂದುವರಿಸಿದೆ. ಹೆತ್ತವರ ಆಶೀರ್ವಾದ ನನ್ನ ಮೇಲಿತ್ತು. ದೇವರು ಬದುಕಿಸಿದ. ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ದಾಖಲೆಯೊಂದಿಗೆ ಚಿನ್ನ ಗೆದ್ದೆ. ಈಗ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ದಿಸಲು ಅಭ್ಯಾಸ ನಡೆಸುತ್ತಿರುವೆ ಎಂದು ವಿಶ್ವನಾಥ್ ಸ್ಪೋರ್ಟ್ಸ್ ಮೇಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

                                                     ಎಲ್ಲರಂತಲ್ಲ ಈ ಸಾಧಕ
ಚಿಕ್ಕಂದಿನಲ್ಲಿ ಮರದ ದಿಮ್ಮಿಗಳನ್ನು ಲಾರಿಗೆ ತುಂಬಿಸುವ ಕೆಲಸದಲ್ಲಿ ತೊಡಗಿದ್ದ ವಿಶ್ವನಾಥ್ ಆ ಕಷ್ಟದ ಬದುಕನ್ನೇ ಕ್ರೀಡೆಯಾಗಿ ಪರಿವರ್ತಿಸಿಕೊಂಡವರು. ಕುಂದಾಪುರದ ಭಂಡಾಡಾರ್ಕಾರ್ಸ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ರಾಷ್ಟ್ರಮಟ್ಟದಲ್ಲಿ ಮಿಂಚಿದ ವಿಶ್ವನಾಥ್ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ. ಈಗ ಎಷ್ಯಾ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.

                                                     ರಾಜ್ಯ ಸರಕಾರದ ನಿರ್ಲಕ್ಷ್ಯ
ರಾಜ್ಯ ಸರಕಾರ ಕೇವಲ ಒಲಿಂಪಿಕ್ಸ್ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳುತ್ತಿದೆ. ಆದರೆ ಇಂಥ ಕ್ರೀಡಾ ಸಾಧಕರನ್ನು ಪ್ರೋತ್ಸಾಹಿಸುವುದು ಯಾರು?. ೨೦೧೪ರಿಂದ ವಿಶ್ವನಾಥ್‌ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳಿಗೆ ನಗದು ಬಹುಮಾನ ಸಿಕ್ಕಿಲ್ಲ. ಸರಕಾರದ ಕ್ರೀಡಾ ಇಲಾಖೆ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಕಾರಣಗಳನ್ನು ನೀಡುತ್ತಿದೆ. ಈ ವರ್ಷ ಕಂತುಗಳಲ್ಲಿ ನಗದು ಬಹುಮಾನ ನೀಡಲಾಗುವುದು ಎಂಬ ಪ್ರಕಟಣೆ ಹೊರಡಿಸಿದೆ. ಗ್ರಾಮೀಣ ಪ್ರದೇಶದಿಂದ ಬಂದು ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದ ಕ್ರೀಡಾ ಸಾಧಕರಿಗೆ ಸರಕಾರ ಪ್ರೋತ್ಸಾಹ ನೀಡಬೇಕಾದ ಅನಿವಾರ್ಯತೆ ಇದೆ.

Related Articles