ಬೆಂಗಳೂರು: ಭಾರತದ ಸ್ಟಾರ್ ಮಹಿಳಾ ಶಟ್ಲರ್ ಸೈನಾ ನೆಹ್ವಾಲ್ ದೇಶದ ಬ್ಯಾಡ್ಮಿಂಟನ್ ದಿಕ್ಕನ್ನೇ ಬದಲಿಸಿದ ಆಟಗಾರ್ತಿ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊಟ್ಟ ಮೊದಲ ಬ್ಯಾಡ್ಮಿಂಟನ್ ತಾರೆ ಎಂಬ ಖ್ಯಾತಿಯ ಸೈನಾ ನೆಹ್ವಾಲ್, ದೇಶ ಕಂಡ ಶ್ರೇಷ್ಠ ಆಟಗಾರ್ತಿಯೂ ಹೌದು.
ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಛಾಪು ಮೂಡಿಸಿರುವ ಸೈನಾ ನೆಹ್ವಾಲ್ ಕಳೆದ ವರ್ಷ ಗ್ಲಾಸ್ಗೊದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿರುವ ಸೈನಾ ನೆಹ್ವಾಲ್‌ಗೆ ಯಾರೂ ಬಾಯ್‌ಫ್ರೆಂಡ್‌ಗಳಿಲ್ಲವೇ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಮೂಡುವುದು ಸಹಜ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸೈನಾ ನೆಹ್ವಾಲ್ ಲವ್ವಲ್ಲಿ ಬಿದ್ದಿದ್ದಾರೆ ಎನ್ನುತ್ತಿವೆ ಬಲ್ಲ ಮೂಲಗಳು.
ಮೂಲಗಳ ಪ್ರಕಾರ ಸೈನಾ ನೆಹ್ವಾಲ್ ಮತ್ತು ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಫೆಬ್ರವರಿ 5ರಂದು ಸೈನಾ ನೆಹ್ವಾಲ್ ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಚಿತ್ರವೊಂದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.
ಸ್ನೇಹಿತರೊಂದಿಗೆ ಹೋಟೆಲ್‌ಗೆ ಊಟಕ್ಕೆ ಹೋಗಿರುವ ಸಂದರ್ಭದಲ್ಲಿ ಸೈನಾ ಪಕ್ಕದಲ್ಲಿ ಕುಳಿತಿರುವ ಕಶ್ಯಪ್, ಸೈನಾ ಅವರ ಹೆಗಲ ಮೇಲೆ ಆತ್ಮೀಯವಾಗಿ ಕೈ ಹಾಕಿದ್ದಾರೆ. ಈ ಹಿಂದೆ ಸೈನಾ ಯಾರೊಂದಿಗೂ ಈ ರೀತಿ ಕಾಣಿಸಿಕೊಂಡಿಲ್ಲ. ಬ್ಯಾಡ್ಮಿಂಟನ್ ಆಡುವ ಸಂದರ್ಭದಲ್ಲೂ ಸೈನಾ, ತಮ್ಮ ಪುರುಷ ಸಹಪಾಠಿಗಳಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಕಶ್ಯಪ್ ಅವರೊಂದಿಗೆ ಇಷ್ಟೊಂದು ಆತ್ಮೀಯವಾಗಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಅವರ ಮಧ್ಯೆ ಸ್ನೇಹದ ಹೊರತಾಗಿ ಬೇರೇನೋ ಇದೆ ಎಂಬ ಅನುಮಾನ ಮೂಡದಿರದು.