Thursday, December 12, 2024

ಸುಜಿತ್ ಕುಮಾರ್‌ಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ

ಬೆಂಗಳೂರು: ಅಂತಾರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಅಂತರಾಷ್ಟ್ರೀಯ ರ್ಯಾಲಿ ಪಟು ಸುಜಿತ್ ಕುಮಾರ್ ಅವರಿಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ ಸಲ್ಲಿಸಿದೆ.


ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸುಜಿತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ನಲ್ಲಿ ಸುಜಿತ್ ಟು ವೀಲರ್ ಕಮಿಷನ್‌ನ ಅಧ್ಯಕ್ಷರಾಗಿರುತ್ತಾರೆ. ಏಷ್ಯಾ ವಿಭಾಗದಲ್ಲಿ ಬರುವ ಎಲ್ಲ ರಾಷ್ಟ್ರಗಳ ರ್ಯಾಲಿಗಳ ಕುರಿತು ಸುಜಿತ್ ಮುತುವರ್ಜಿ ವಹಿಸಲಿದ್ದಾರೆ,
21 ವರ್ಷಗಳ ಕಾಲ ರ್ಯಾಲಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸುಜಿತ್ ಎರಡು ವರ್ಷಗಳ ಹಿಂದೆ ವೃತ್ತಿಪರ ರ್ಯಾಲಿಗೆ ವಿದಾಯ ಹೇಳಿದ್ದರು. ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ಗೆ ಏಷ್ಯಾ ವಲಯದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯರಲ್ಲಿ ಸುಜಿತ್ ಮೂರನೆಯವರು.
‘‘ರ್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆಂಬ ಆತ್ಮವಿಶ್ವಾಸವಿದೆ. ಅದೇ ನನ್ನನ್ನು ಇಲ್ಲಿಯವರೆಗೂ ಕರೆ ತಂದಿದೆ. ರಾಷ್ಟ್ರಮಟ್ಟದಲ್ಲಿ ಯಾವ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದ್ದೇನೋ, ಅಂತರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಕೆಲಸ ಮಾಡುತ್ತೇನೆ. ನನ್ನ ಮೇಲಿಟ್ಟ ನಂಬಿಕೆಗೆ ಕಿಂಚಿತ್ತೂ ಅಡ್ಡಿಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ,’’ ಎಂದು ಸುಜಿತ್ ದಿ ಸ್ಪೋರ್ಟ್ಸ್‌ಗೆ ತಿಳಿಸಿದರು.

Related Articles