ರೋಹಿತ್ ಮೇಲಿರುವ ಪ್ರೀತಿ ರಾಹುಲ್, ಕರುಣ್ ಮೇಲೆ ಏಕಿಲ್ಲ?
ಬೆಂಗಳೂರು: ಪ್ರತಿಭೆ, ತಾಕತ್ತು, ಸವಾಲಿಗೆ ಎದೆಯೊಡ್ಡುವ ಗಟ್ಟಿ ಗುಂಡಿಗೆ… ಭಾರತ ಕ್ರಿಕೆಟ್ ತಂಡದ ಪರ ಆಡಬೇಕೆಂದರೆ ಬರೀ ಇಷ್ಟೇ ಇದ್ದರೆ ಸಾಲದು. ಅದೃಷ್ಠವೂ ಇರಬೇಕು. ಎಲ್ಲಾ ಇದ್ದೂ ಅದೃಷ್ಠವೇ ಇಲ್ಲದಿದ್ದರೆ ಮತ್ತೊಬ್ಬ ಜೆ.ಅರುಣ್ ಕುಮಾರ್, ಮತ್ತೊಬ್ಬ ಅಮೋಲ್ ಮಜುಮ್ದಾರ್ ಅವರ ಸಾಲಿಗೆ ಸೇರಬಹುದು. ಹೀಗಾಗಿ ಭಾರತ ತಂಡದ ಪರ ಆಡಬೇಕಾದರೆ ಅದೃಷ್ಠ ಬೇಕೇ ಬೇಕು. ಭಾರತದ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ಈ ಅದೃಷ್ಠವನ್ನು ಸದಾ ಬೆನ್ನಿಗೇ ಕಟ್ಟಿಕೊಂಡಿರುವ ಕ್ರಿಕೆಟಿಗ.

ರೋಹಿತ್ ಶರ್ಮಾ ಪ್ರತಿಭೆಯ ಬಗ್ಗೆ ಎರಡು ಮಾತೇ ಇಲ್ಲ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನು ಬಾರಿಸಿರುವ ಆಟಗಾರನ ತಾಕತ್ತನ್ನು ಪ್ರಶ್ನಿಸುವಂತೆಯೇ ಇಲ್ಲ. ಅವರನ್ನು ಸವಾಲಿಗೆ ಎದೆಯೊಡ್ಡುವ ಗಟ್ಟಿ ಗುಂಡಿಗೆ ಎಂದು ಎದೆ ತಟ್ಟಿ ಹೇಳಬಹುದು. ಆದರೆ ರೋಹಿತ್ ಶರ್ಮಾ ಇಂದು ಭಾರತ ಏಕದಿನ ಹಾಗೂ ಟಿ20 ತಂಡಗಳ ಉಪನಾಯಕನಾಗಿ ಬೆಳೆದು ನಿಲ್ಲಬೇಕಾದರೆ ಅದರ ಹಿಂದೆ ಅವರ ಪ್ರತಿಭೆ, ಸಾಮರ್ಥ್ಯಗಳ ಜೊತೆಗೆ ಅದೃಷ್ಠವೂ ಸಾಕಷ್ಟು ಕೆಲಸ ಮಾಡಿದೆ.
ಬೇರೆ ಆಟಗಾರರ ಆಯ್ಕೆಯ ವೇಳೆ ಅನುಸರಿಸುವ ಮಾನದಂಡವನ್ನು ರೋಹಿತ್ ವಿಚಾರದಲ್ಲೂ ಅನುಸರಿಸಿದ್ದರೆ, ಅವರ ಅಂತರಾಷ್ಟ್ರೀಯ ವೃತ್ತಿಬದುಕು ಯಾವತ್ತೊ ಕೊನೆಗೊಂಡಿರುತ್ತಿತ್ತು. ಏಕೆಂದರೆ ರೋಹಿತ್ ಶರ್ಮಾ ಅವರ ಆಟ ಮನಸ್ಸಿಗೆ ಮುದ ನೀಡಿದರೂ, ಸ್ಥಿರತೆ ಇಲ್ಲ. 3-4 ಇನ್ನಿಂಗ್ಸ್‌ಗಳಲ್ಲಿ ಮುಗ್ಗರಿಸುವುದು, ಒಂದು ದೊಡ್ಡ ಇನ್ನಿಂಗ್ಸ್ ಆಡುವುದು. ಆ ಮೂಲಕ ತನ್ನ ಆಯ್ಕೆಯನ್ನು ಪ್ರಶ್ನಿಸಿದವರ ಬಾಯಿ ಮುಚ್ಚಿಸುವ ಎದೆಗಾರಿಕೆ ರೋಹಿತ್‌ಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯ ಮೊದಲ 3 ಪಂದ್ಯಗಳಲ್ಲಿ ಕ್ರಮವಾಗಿ 0, 17 ಮತ್ತು 11 ರನ್ ಗಳಿಸಿ ನೆಲ ಕಚ್ಚಿದ್ದ ರೋಹಿತ್ ಶರ್ಮಾ 4ನೇ ಪಂದ್ಯದಲ್ಲಿ 89 ರನ್ ಸಿಡಿಸಿ ಟೀಕಾಕಾರರ ಬಾಯಿಗೆ ಬೀಗ ಜಡಿದಿದ್ದಾರೆ. ಅದು ರೋಹಿತ್ ಶರ್ಮಾ ತಾಕತ್ತು.

ರೋಹಿತ್ ಶರ್ಮಾ ಉತ್ತಮ ಆಟಗಾರ. ಹೀಗಾಗಿ ಕಷ್ಟದ ದಿನಗಳಲ್ಲೂ ಅವರ ಬೆನ್ನಿಗೆ ನಿಂತು ಪ್ರೋತ್ಸಾಹಿಸುವುದರಲ್ಲಿ ತಪ್ಪೇನೂ ಇಲ್ಲ. ಬಿಸಿಸಿಐ, ಆಯ್ಕೆ ಸಮಿತಿ, ಭಾರತ ತಂಡ ವ್ಯವಸ್ಥಾಪಕ ಮಂಡಳಿ, ಮಾಜಿ ನಾಯಕ ಎಂ.ಎಸ್ ಧೋನಿ, ಹಾಲಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ. ಈ ಕಾರಣದಿಂದ ರೋಹಿತ್ ಶರ್ಮಾ ಇನ್ನೂ ಆಡುತ್ತಿದ್ದಾರೆ.
ಆದರೆ ರೋಹಿತ್ ಶರ್ಮಾ ಮೇಲಿರುವ ಪ್ರೀತಿ ನಮ್ಮ ಕರ್ನಾಟಕದ ಪ್ರತಿಭೆಗಳಾದ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಅವರ ಮೇಲೆ ಏಕಿಲ್ಲ? ಮುಂಬೈ ಆಟಗಾರ ರೋಹಿತ್ ಎಷ್ಟೇ ವೈಫಲ್ಯಗಳನ್ನು ಎದುರಿಸಿದರೂ ಕೈ ಹಿಡಿದು ಮೇಲೆತ್ತುವ ಮಂದಿ ನಮ್ಮ ಹುಡುಗರನ್ನೇಕೆ ಕಡೆಗಣಿಸುತ್ತಿದ್ದಾರೆ? ಅಷ್ಟಕ್ಕೂ ರಾಹುಲ್ ಮತ್ತು ಕರುಣ್ ನಾಯರ್ ಪ್ರತಿಭೆಯಲ್ಲಿ ರೋಹಿತ್‌ಗಿಂತ ಕಡಿಮೆಯೇನಲ್ಲ. ಇಬ್ಬರೂ ಅದ್ಭುತ ಪ್ರತಿಭಾವಂತರೇ. ರಾಹುಲ್ ಈಗಾಗಲೇ ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ಕರೆಸಿಕೊಂಡ ಆಟಗಾರ. ಕರುಣ್ ನಾಯರ್ ಹೆಸರಲ್ಲಿ ಟೆಸ್ಟ್ ತ್ರಿಶತಕದ ದಾಖಲೆಯಿದೆ. ಇಬ್ಬರೂ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುವ ತಾಕತ್ತಿರುವ ಕ್ರಿಕೆಟಿಗರು. ಆದರೆ ಭಾರತ ತಂಡದಲ್ಲಿ ಮಾತ್ರ ಇವರು ಮಲತಾಯಿ ಮಕ್ಕಳು. ಮೊದಲು ರಾಹುಲ್ ವಿಚಾರಕ್ಕೆ ಬರೋಣ.

ಈಗ ಕ್ರಿಕೆಟ್ ಜಗತ್ತನ್ನು ಆಳುತ್ತಿರುವ ವಿರಾಟ್ ಕೊಹ್ಲಿಯ ಬಗ್ಗೆ 7-8 ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ‘ಈತ ಶ್ರೇಷ್ಠ ಆಟಗಾರನಾಗುತ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ಜೆನ್ನಿಂಗ್ಸ್ ನುಡಿದ ಭವಿಷ್ಯ ಸುಳ್ಳಾಗಿಲ್ಲ. ಅದೇ ಜೆನ್ನಿಂಗ್ಸ್ ‘ರಾಹುಲ್ ಮುಂದಿನ ವಿರಾಟ್ ಕೊಹ್ಲಿ’ ಎಂದು 2 ವರ್ಷಗಳ ಹಿಂದೆ ಹೇಳಿದ್ದಾರೆ.
ಅಂದರೆ ರಾಹುಲ್ ಕೂಡ ವಿರಾಟ್ ಕೊಹ್ಲಿಯಂತೆ ಮಿಂಚುವ ಸಾಮರ್ಥ್ಯವಿರುವ ಆಟಗಾರ. ಹಾಗಾದರೆ ಪ್ರತಿಭಾವಂತ ಎಂಬ ಕಾರಣಕ್ಕೆ ರೋಹಿತ್ ಶರ್ಮಾಗೆ ಸಿಗುತ್ತಿರುವ ಅವಕಾಶಗಳು ರಾಹುಲ್‌ಗೂ ಸಿಗಬೇಕಲ್ಲವೇ? ರೋಹಿತ್ ಉತ್ತಮ ಆಟಗಾರ ಎಂದು ಬೆನ್ನು ತಟ್ಟುವ ಮಂದಿ ರಾಹುಲ್ ವಿಚಾರದಲ್ಲೇಕೆ ವೌನ?.
ರೋಹಿತ್ ಶರ್ಮಾ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಾರೆಯೇ ವಿನಃ ವಿದೇಶಿ ನೆಲಗಳಲ್ಲಿ ಟೆಸ್ಟ್ ಕ್ರಿಕೆಟ್ ಆಡುವಾಗ ಅವರ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಆದರೆ ರಾಹುಲ್ ಹಾಗಲ್ಲ. ಏಕದಿನ, ಟಿ20ಯ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ದೀರ್ಘಕಾಲ ಆಡುವ ಭರವಸೆ ಮೂಡಿಸಿರುವ ಆಟಗಾರ. ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ರಾಹುಲ್ ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ರ್ಯಾನ್ ಹ್ಯಾರಿಸ್ ಅವರಂತಹ ಘಟಾನುಘಟಿ ವೇಗಿಗಳ ಮುಂದೆ ಬಾರಿಸಿದ್ದಾರೆ. ಇಂತಹ ಬೌಲರ್‌ಗಳನ್ನು ಎದುರಿಸಿ ರೋಹಿತ್ ಟೆಸ್ಟ್‌ನಲ್ಲಿ ಶತಕ ಬಾರಿಸಿಯೇ ಇಲ್ಲ.
