Tuesday, November 12, 2024

ರೋಚಕ ಹಂತದಲ್ಲಿ ಐಎಸ್‌ಎಲ್; ಪ್ಲೇ ಆಫ್ ಸ್ಥಾನಗಳಿಗೆ ಪೈಪೋಟಿ ತೀವ್ರ

ಫೆಬ್ರವರಿ 12: ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡ ಹೀರೊ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) 4ನೇ ಆವೃತ್ತಿಯಲ್ಲಿ ಇನ್ನೂ 3 ಪಂದ್ಯಗಳು ಬಾಕಿ ಇರುತ್ತಲೇ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡ ಮೊದಲ ಕ್ಲಬ್ ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ. ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಪದಾರ್ಪಣೆಯ ತಂಡವಾದ ಬೆಂಗಳೂರು ಎಫ್‌ಸಿ, 15 ಪಂದ್ಯಗಳಲ್ಲಿ 11 ಗೆಲುವುಗಳ ಸಹಿತ 33 ಅಂಕಗಳನ್ನು ಕಲೆ ಹಾಕಿ ಅಗ್ರಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಪ್ರಸಕ್ತ ಸಾಲಿನ ಐಎಸ್‌ಲ್‌ನ 90 ಪಂದ್ಯಗಳಲ್ಲಿ 71 ಪಂದ್ಯಗಳೂ ಮುಗಿದಿದ್ದರೂ, ಮುಂದಿನ 3 ವಾರಗಳು ಪ್ಲೇ ಆಫ್‌ನ ಉಳಿದ 3 ಸ್ಥಾನಗಳನ್ನು ನಿರ್ಧರಿಸುವ ಹಾದಿಯಲ್ಲಿ ಕಠಿಣವಾಗಿದೆ.
ಲೀಗ್‌ನಲ್ಲಿ 2ನೇ ಶ್ರೇಷ್ಠ ತಂಡವಾಗುವ ಹಾದಿಯಲ್ಲಿರುವ ಎಫ್‌ಸಿ ಪುಣೆ ಸಿಟಿ ತಂಡ, 28 ಅಂಕಗಳನ್ನು ಸಂಪಾದಿಸಿದ್ದು ಇನ್ನೂ 3 ಪಂದ್ಯಗಲನ್ನು ಆಡಬೇಕಿದೆ. ಆದರೂ ಆ ತಂಡ ಪ್ಲೇ ಆಫ್ ಸ್ಥಾನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಪ್ಲೇ ಆಫ್ ಸ್ಥಾನಗಳಿಗಾಗಿ ಕಠಿಣ ಸ್ಪರ್ಧೆ ನಡೆಯುತ್ತಿರುವ ಸಂದರ್ಭದಲ್ಲಿ 6 ತಂಡಗಳು ಅರ್ಹತೆ ಪಡೆಯುವ ಬಗ್ಗೆ ವಿಶ್ವಾಸ ಹೊಂದಿವೆ. ಅಂತಿಮವಾಗಿ ಬೆಂಗಳೂರು ಎಫ್‌ಸಿ ಹೊರತು ಪಡಿಸಿ 3 ಶ್ರೇಷ್ಠ ತಂಡಗಳು ಪ್ಲೇ ಆಫ್ ಹಂತಕ್ಕೇರಲಿವೆ.
ಭಾನುವಾರ ನಡೆದ ಮಹಾರಾಷ್ಟ್ರ ಡರ್ಬಿಯಲ್ಲಿ ಮುಂಬೈ ಸಿಟಿ ತಂಡ 0-2 ಗೋಲುಗಳಿಂದ ಪುಣೆ ಸಿಟಿ ವಿರುದ್ಧ ಸೋತಿತ್ತು. ಆ ಗೆಲುವು ಪುಣೆ ತಂಡಕ್ಕೆ ತನ್ನ ಅಂಕ ಗಳಿಕೆಯನ್ನು 28ಕ್ಕೇರಿಸಲು ನೆರವಾಗಿದ್ದು, ಅವರು 2ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಪುಣೆ ತಂಡದ ಪ್ಲೇ ಆಫ್ ಕನಸು ನನಸಾಗಲು ಇನ್ನು 3 ಅಂಕಗಳು ಸಾಕು. ಪುಣೆ ಸಿಟಿ ತಂಡ ಐಎಸ್‌ಎಲ್ ಆರಂಭವಾದಂದಿನಿಂದ ಇದುವರೆಗೆ ಒಮ್ಮೆಯೂ ಸೆಮಿಫೈನಲ್ ಪ್ರವೇಶಿಸಿಲ್ಲ. ಜೆಮ್ಶೆಡ್‌ಪುರ್ ಎಫ್‌ಸಿ(25 ಂಕ), ಚೆನ್ನೈಯಿನ್ ಎಫ್‌ಸಿ (24 ಅಂಕ), ಕೇರಳ ಬ್ಲಾಸ್ಟರ್ಸ್ (21 ಅಂಕ) ಮತ್ತು ಎಫ್‌ಸಿ ಗೋವಾ (20 ಅಂಕ) ತಂಡಗಳು ಪ್ಲೇ ಆಫ್ ಮೇಲೆ ಕಣ್ಣಿಟ್ಟಿವೆ.
ಪುಣೆ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಲೀಗ್ ಲೀಡರ್ ಬೆಂಗಳೂರು ಎಫ್‌ಸಿ ವಿರುದ್ಧ ಫೆಬ್ರವರಿ 16ರಂದು ಆಡಲಿದೆ. ಮತ್ತೊಂದು ಪಂದ್ಯವನ್ನು ಫೆಬ್ರವರಿ 25ರಂದು ಎಫ್‌ಸಿ ಗೋವಾ ವಿರುದ್ಧ ಆಡಲಿದೆ. ಅಂತಿಮ ಲೀಗ್ ಪಂದ್ಯವನ್ನು ತವರಿನ ಹೊರಗೆ ಡೆಲ್ಲಿ ಡೈನಾಮೋಸ್ ವಿರುದ್ಧ ಆಡಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೈನಾಮೋಸ್ ತಂಡ ಈಗಾಗಲೇ ಬೆಂಗಳೂರು ಎಫ್‌ಸಿಯನ್ನು ಸೋಲಿಸಿದ್ದು, ಚೆನ್ನೈಯಿನ್ ಎಫ್‌ಸಿಯ ಓಟಕ್ಕೂ ತಡೆಯೊಡ್ಡಿದೆ. ಅಲ್ಲದೆ ಕಳೆದ ವರ್ಷದ ನವೆಂಬರ್ 22ರಂದು ನಡೆದ ಮನೆಯಂಗಳದಲ್ಲೇ ನಡೆದ ಐಎಸ್‌ಎಲ್-4ರ ತನ್ನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪುಣೆ ಸೋಲುಂಡಿತ್ತು.
ಭಾನುವಾರ ಡೆಲ್ಲಿ ಡೈನಾಮೋಸ್ ವಿರುದ್ಧ ಡ್ರಾ ಸಾಧಿಸಿರುವುದು ಕಾರಣ ಚೆನ್ನೈಯಿನ್ ಎಫ್‌ಸಿಯ ಪ್ಲೇ ಆಫ್ ಅವಕಾಶಕ್ಕೆ ಹೊಡೆತ ನೀಡಿದೆ. ಹೀಗಾಗಿ ಎಫ್‌ಸಿ ಗೋವಾ, ಜೆಮ್ಶೆಡ್‌ಪುರ್ ಮತ್ತು ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯಗಳು ಚೆನ್ನೈಯಿನ್ ಎಫ್‌ಸಿಗೆ ಮಹತ್ವದ್ದಾಗಿವೆ.
ಸತತ 3 ಡ್ರಾಗಳೊಂದಿಗೆ ಅಭಿಯಾನ ಆರಂಭಿಸಿದ್ದ ಜೆಮ್ಶೆಡ್‌ಪುರ್ ಎಫ್‌ಸಿ, ಅದ್ಭುತ ರೀತಿಯಲ್ಲಿ ಪುಟಿದೆದ್ದು ನಿಂತಿದ್ದು, ಕಳೆದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದೆ.  ಮುಂದಿನ ಪಂದ್ಯಗಳು ಜೆಮ್ಶೆಡ್‌ಪುರ್ ಪಾಲಿಗೆ ಕಠಿಣವಾಗಿದ್ದು, ಚೆನ್ನೈಯಿನ್ ಎಫ್‌ಸಿ, ಬೆಂಗಳೂರು ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳನ್ನು ಎದುರಿಸಬೇಕಿದೆ. ಆದರೆ ತವರಿನಲ್ಲಿ ಆಡಲಿರುವ ಎರಡು ಪಂದ್ಯಗಳು ಸೇರಿ ಮೂರು ಪಂದ್ಯಗಳಲ್ಲಿ 2ನ್ನು ಗೆದ್ದರೂ ಅವರು ಗುರಿ ಸಾಧಿಸಲಿದ್ದಾರೆ.
ಲೀಗ್ ಆರಂಭದಲ್ಲಿ ಫೇವರಿಟ್ಸ್ ಎಂದೇ ಬಿಂಬಿತವಾಗಿದ್ದ ಎಫ್‌ಸಿ ಗೋವಾ ತಂಡ ತನ್ನ ಲಯವನ್ನು ಕಳೆದುಕೊಂಡಿದೆ. ಗೋಲುಗಳನ್ನು ಗಳಿಸಲು ಹೆಸರುವಾಸಿಯಾಗಿರುವ ಸರ್ಜಿಯೊ ಲೊಬೆರಾ ಮುಂದಾಳತ್ವದ ತಂಡ ಕಳೆದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿರುವುದರಿಂದ ಅವರ ಹಾದಿ ಕಠಿಣವಾಗಿದೆ. ದುರ್ಬಲ ರಕ್ಷಣಾ ಪಡೆ ತಂಡದ ಹಿನ್ನಡೆಗೆ ಕಾರಣವಾಗಿದೆ.
ತನ್ನ ಮುಂದಿನ ತವರು ಪಂದ್ಯದಲ್ಲಿ ಫೆಬ್ರವರಿ 16ರಂದು ಎಫ್‌ಸಿ ಗೋವಾ ತಂಡ ಚೆನ್ನೈಯಿನ್ ಎಫ್‌ಸಿಯನ್ನು ಎದುರಿಸಲಿದೆ. ಆ ಪಂದ್ಯ ಆತಿಥೇಯ ಎಫ್‌ಸಿ ಗೋವಾ ಮತ್ತು ಪ್ರವಾಸಿ ಚೆನ್ನೈಯಿನ್ ಎಫ್‌ಸಿ ಪಾಲಿಗೆ ಮಹತ್ವದ್ದಾಗಿದೆ.

Related Articles