ಮಹಿಳಾ ಏಕದಿನ ಕ್ರಿಕೆಟ್: ಎಲೈಸ್ ಪೆರಿ ಆಲ್ರೌಂಡ್ ಆಟ, ಭಾರತ ವಿರುದ್ಧ ಸರಣಿ ಗೆದ್ದ ಆಸೀಸ್ ವನಿತೆಯರು

0
341
PC: Twitter/BCCI
ವಡೋದರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಸೋಲು ಕಂಡಿರುವ ಭಾರತ ಮಹಿಳಾ ತಂಡ, 3 ಪಂದ್ಯಗಳ ಸರಣಿಯನ್ನು ಕಾಂಗರೂಗಳಿಗೆ ಒಪ್ಪಿಸಿದೆ.
ವಡೋದರದ ರಿಲಾಯನ್ಸ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ಮೊದಲ ಪಂದ್ಯವನ್ನು ಸೋತಿದ್ದ ಭಾರತ ತಂಡ, ಸರಣಿಯನ್ನು ಜೀವಂತವಾಗಿಡಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತುಘಿ. ಅನಾರೋಗ್ಯದ ಕಾರಣ ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕಿ ಮಿಥಾಲಿ ರಾಜ್ ಈ ಪಂದ್ಯಕ್ಕೆ ವಾಪಸ್ಸಾದರೂ ಗೆಲುವು ದಕ್ಕಲಿಲ್ಲಘಿ. ಆಸ್ಟ್ರೇಲಿಯಾ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿತು.
PC: Twitter/BCCI
ಈ ಸರಣಿ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ, ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 287 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ನಿಕೋಲ್ ಬೋಲ್ಟನ್ 84 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಸ್ಟಾರ್ ಆಲ್ರೌಂಡರ್ ಎಲೈಸ್ ಪೆರಿ 70 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಬೆತ್ ಮೂನಿ 40 ಎಸೆತಗಳಲ್ಲಿ 56 ರನ್ ಗಳಿಸಿದರು. ಭಾರತ ಪರ ಮಧ್ಯಮ ವೇಗಿ ಶಿಖಾ ಪಾಂಡೆ 61 ರನ್ನಿತ್ತು 3 ವಿಕೆಟ್ ಉರುಳಿಸಿದರು.
ನಂತರ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಮಹಾರಾಷ್ಟ್ರದ ಸಾಂಗ್ಲಿಯ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 53 ಎಸೆತಗಳಲ್ಲಿ 67 ರನ್ ಸಿಡಿಸಿ ಉತ್ತಮ ಆರಂಭ ಒದಗಿಸಿದರು. ಮಂಧಾನ ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಮಿಥಾಲಿ ರಾಜ್, ಉಪನಾಯಕಿ ಹರ್ಮನ್‌ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ ತಂಡಕ್ಕೆ ಆಸರೆಯಾಗದ ಕಾರಣ ಭಾರತ ಸೋಲು ಅನುಭವಿಸಬೇಕಾಯಿತು.
ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಭಾನುವಾರ ಇದೇ ಮೈದಾನದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287 ರನ್
ನಿಕೋಲ್ ಬೋಲ್ಟನ್ 84, ಎಲೈಸ್ ಪೆರಿ ಅಜೇಯ 70, ಬೆತ್ ಮೂನಿ 56; ಶಿಖಾ ಪಾಂಡೆ 3/61, ಪೂನಂ ಯಾದವ್ 2/52, ಏಕ್ತಾ ಬಿಷ್ಟ್ 1/55, ಹರ್ಮನ್‌ಪ್ರೀತ್ ಕೌರ್ 1/23.
ಭಾರತ:49.2 ಓವರ್‌ಗಳಲ್ಲಿ 227 ರನ್‌ಗಳಿಗೆ ಆಲೌಟ್
ಸ್ಮೃತಿ ಮಂಧಾನ 67, ಪೂನಂ ರಾವತ್ 27, ದೀಪ್ತಿ ಶರ್ಮಾ 26, ಪೂಜಾ ವಸಾಕರ್ 30; ಜೆಸ್ ಜೊನಾಸೆನ್ 3/51, ವೆಲ್ಲಿಂಗ್ಟನ್ 2/20, ಎಲೈಸ್ ಪೆರಿ 2/41.