ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಅಂಗಣ ಸಿದ್ಧ

0
354

ಬೆಂಗಳೂರು: ವಾಲಿಬಾಲ್ ಪ್ರಿಯರಿಗೊಂದು ಸಿಹಿ ಸುದ್ದಿ. ನಗರದ ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಒಳಾಂಗಣ ತಲೆ ಎತ್ತಿದೆ. ಸ್ಥಳೀಯ ಶಾಸಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಿಸಲಾಗಿರುವ ಈ ಅಂಗಣ ಮಾರ್ಚ್ 19ರಂದು ಉದ್ಘಾಟನೆಗೊಳ್ಳಲಿದೆ.


ಈ ಅಂಗಣವನ್ನು ಬೆಂಗಳೂರು ಉತ್ತರ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ಅಶ್ವತ್ಥನಾರಾಯಣ ಅವರ ಅನುದಾನದಲ್ಲಿ ಒಟ್ಟು 5.61 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಮಿಸಲಾಗಿದೆ. ಸದಾನಂದ ಗೌಡ 1.90 ಕೋಟಿ ರೂ., ರಾಜೀವ್ ಚಂದ್ರಶೇಖರ್ 50 ಲಕ್ಷ ರೂ. ಹಾಗೂ ಅಶ್ವತ್ಧನಾರಾಯಣ 3.21 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ.

48*23 ಜಾಗದಲ್ಲಿ ಕ್ರೀಡಾಂಗಣ ತಲೆ ಎತ್ತಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ಒಂದು ವಾಲಿಬಾಲ್ ಕೋರ್ಟ್, 2 ಟೀಮ್ ರೂಮ್‌ಗಳು, 2 ಸ್ಟೋರ್ ರೂಮ್‌ಗಳು, 500 ಜನರು ಕುಳಿತು ಪಂದ್ಯ ವೀಕ್ಷಿಸಬಲ್ಲ ಗ್ಯಾಲರಿ ಹಾಗೂ ವಿವಿಐಪಿ ಗ್ಯಾಲರಿಗಳನ್ನು ಕ್ರೀಡಾಂಗಣ ಹೊಂದಿದೆ.
ಕ್ರೀಡಾಂಗಣ ನಿರ್ಮಾಣಗೊಂಡಿರುವ ಸ್ಥಳದಲ್ಲಿ ಈ ಹಿಂದೆ ಬಿಬಿಎಂಪಿ ಕಚೇರಿ ಮತ್ತು ವಸತಿ ಗೃಹದ ಕಟ್ಟಡವಿತ್ತು. ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಿಬಿಎಂಪಿ ಕಚೇರಿಯನ್ನು ಸೇವಾ ಕೇಂದ್ರ ಕಟ್ಟಡಕ್ಕೆ ಸ್ಥಳಾಂತರಿಸಿ, ಇಲ್ಲಿ ಸುಸಜ್ಜಿತ ವಾಲಿಬಾಲ್ ಅಂಗಣವನ್ನು ನಿರ್ಮಿಸಲಾಗಿದೆ.