ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಸೋಮಶೇಖರ್ ಅವರದ್ದು ದೊಡ್ಡ ಹೆಸರು. 90ರ ದಶಕದಲ್ಲಿ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಶಿರಗುಪ್ಪಿ, ಕರ್ನಾಟಕ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಆಟಕ್ಕೆ ಗುಡ್‌ಬೈ ಹೇಳಿದ ನಂತರ ಕೋಚ್ ಆಗಿ ತಮ್ಮನ್ನು ತೊಡಗಿಸಿಕೊಂಡ ಶಿರಗುಪ್ಪಿ, ಕರ್ನಾಟಕ ರಣಜಿ ತಂಡದ ಸಹಾಯಕ ತರಬೇತುದಾರರಾಗಿ ಉತ್ತಮ ಫಲಿತಾಂಶಗಳನ್ನು ಕೊಟ್ಟಿದ್ದಾರೆ.
2009-10ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಮುಖ್ಯಕೋಚ್ ಸನತ್ ಕುಮಾರ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ಶಿರಗುಪ್ಪಿ, ಕರ್ನಾಟಕ ತಂಡದ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ ಕೆಎಸ್‌ಸಿಎನ ಕರ್ನಾಟಕ ಕ್ರಿಕೆಟ್ ಅಕಾಡೆಮಿಯಲ್ಲೂ ಕೋಚ್ ಆಗಿ ರಾಜೇಶ್ ಕಾಮತ್ ಅವರೊಂದಿಗೆ ಕ್ರಿಕೆಟ್ ಪ್ರತಿಭೆಗಳ ಬೆಳವಣಿಗೆಗೆ ನೆರವಾಗಿದ್ದಾರೆ.
ಇದೀಗ ಸೋಮಶೇಖರ್ ಶಿರಗುಪ್ಪಿ ತಮ್ಮ ತವರೂರು ಹುಬ್ಬಳ್ಳಿಯಲ್ಲಿ ಮಗಳ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ಆರಂಭಿಸಿದ್ದಾರೆ. ಶಿರಗುಪ್ಪಿ ಅವರ ಮಗಳು ತೇಜಲ್ ಕಳೆದ ವರ್ಷ ಅಕಾಲಿಕ ಮರಣಕ್ಕೀಡಾಗಿದ್ದಳು. ಮಗಳ ನೆನಪಿನಲ್ಲಿ ಶಿರಗುಪ್ಪಿ “ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ” ಆರಂಭಿಸಿದ್ದಾರೆ.
ಹುಬ್ಬಳ್ಳಿಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಇನ್ಫೊಸಿಸ್ ಬಳಿ ಶಿರಗುಪ್ಪಿ ಅವರ ಕ್ರಿಕೆಟ್ ಅಕಾಡೆಮಿ ತಲೆ ಎತ್ತಿದೆ. ಕೆಲವೇ ದಿನಗಳಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಆರಂಭಗೊಳ್ಳಲಿದೆ.