Saturday, April 20, 2024

ಮಂಧಾನ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಜಯ

ಮಂಧಾನ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಜಯ
ದಿ ಸ್ಪೋರ್ಟ್ಸ್ ಬ್ಯೂರೋ
ಕಿಂಬರ್ಲಿ: ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 88 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
PC: Twitter/ICC
ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾದ ಕಿಂಬರ್ಲಿಯಲ್ಲಿರುವ ಡೈಮಂಡ್ ಓವಲ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 213 ರನ್ ಕಲೆ ಹಾಕಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 98 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 84 ರನ್ ಸಿಡಿಸಿದರು. ನಾಯಕಿ ಮಿಥಾಲಿ ರಾಜ್ 45 ರನ್‌ಗಳಿಗೆ ಔಟಾದರು.
ನಂತರ ಗುರಿ ಬೆನ್ನತಿದ ದಕ್ಷಿಣ ಆಫ್ರಿಕಾ ತಂಡ, 43.2 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಭಾರತ ಪರ ಅನುಭವಿ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ(24ಕ್ಕೆ4) 4 ವಿಕೆಟ್, ಶಿಖಾ ಪಾಂಡೆ(23ಕ್ಕೆ3) 3 ವಿಕೆಟ್ ಹಾಗೂ ಪೂನಂ ಯಾದವ್(22ಕ್ಕೆ2) 2 ವಿಕೆಟ್ ಉರುಳಿಸಿದರು. ಸರಣಿಯ 2ನೇ ಪಂದ್ಯ ಬುಧವಾರ ಇದೇ ಮೈದಾನದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಲ್ಲಿ 213/7 (ಸ್ಮೃತಿ ಮಂಧಾನ 84, ಮಿಥಾಲಿ ರಾಜ್ 45; ಮರಿಜೇನ್ ಕಾಪ್ 26ಕ್ಕೆ2, ಆಯಬೊಂಗಾ ಖಾಕ 47ಕ್ಕೆ2).
ದಕ್ಷಿಣ ಆಫ್ರಿಕಾ: 43.2 ಓವರ್‌ಗಳಲ್ಲಿ 125 (ಡೇನ್ ವಾನ್ ನೀಕರ್ಕ್ 41; ಜೂಲನ್ ಗೋಸ್ವಾಮಿ 24ಕ್ಕೆ4, ಶಿಖಾ ಪಾಂಡೆ 23ಕ್ಕೆ3, ಪೂನಂ ಯಾದವ್ 22ಕ್ಕೆ2).

Related Articles