ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ: ಭಾರತೀಯರ ಮನ ಗೆದ್ದ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ

0
338
PC: Twitter

ಬೆಂಗಳೂರು: ಪಾಕಿಸ್ತಾನದ ಸ್ಫೋಟಕ ಹೊಡೆತಗಳ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಭರ್ಜರಿ ಹೊಡೆತಗಳಿಗೆ ಹೆಸರಾದವರು. ಅಫ್ರಿದಿ ಮೈದಾನದಲ್ಲಿದ್ದರೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಗ್ಯಾರಂಟಿ. ಪಾಕ್‌ನ ಮಾಜಿ ಆಲ್ರೌಂಡರ್ ಅಫ್ರಿದಿಗೆ
ಭಾರತದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ತಮ್ಮ ನಡವಳಿಕೆಯಿಂದ ಅಫ್ರಿದಿ, ಭಾರತೀಯರ ಮನ ಗೆದ್ದಿದ್ದಾರೆ.

PC: Twitter

ಫೋಟೋಗಾಗಿ ಮುಗಿಬಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ‘ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ ನೀಡಿ’ ಎಂದು ಅಫ್ರಿದಿ ಪಾಠ ಮಾಡಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಸೇಂಟ್ ಮಾರಿಟ್ಜ್‌ನಲ್ಲಿ ನಡೆಯುತ್ತಿರುವ ಐಸ್ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರ ನಂತರ ಈ ಘಟನೆ ನಡೆದಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಪಂದ್ಯದ ನಂತರ ಕೆಲ ಭಾರತದ ಅಭಿಮಾನಿಗಳು ಶಾಹಿದ್ ಅಫ್ರಿದಿ ಅವರ ಬಳಿ ಫೋಟೋಗಾಗಿ ಮನವಿ ಮಾಡಿದ್ದಾರೆ. ಈ ಸಂದರ್ಭಲ್ಲಿ ಆ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದುಕೊಂಡಿರಲಿಲ್ಲ. ಇದನ್ನು ಗಮನಿಸಿದ ಅಫ್ರಿದಿ, ‘ದೇಶದ ಧ್ವಜವನ್ನು ಮೊದಲು ಸರಿಯಾಗಿ ಹಿಡಿದುಕೊಳ್ಳಿ, ಫೋಟೋ ಏನಿದ್ದರೂ ಆ ನಂತರ’ ಎಂದು ಕ್ರಿಕೆಟ್ ಪ್ರಿಯರಿಗೆ ಸೂಚಿಸಿದ್ದಾರೆ. ಅಫ್ರಿದಿ ಮಾತಿನಿಂದ ಎಚ್ಚೆತ್ತ ಆ ಕ್ರಿಕೆಟ್ ಅಭಿಮಾನಿಗಳು ಧ್ವಜವನ್ನು ಸರಿಯಾಗಿ ಹಿಡಿದುಕೊಂಡು ನಂತರ ಶಾಹಿದ್ ಅಫ್ರಿದಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲಿನಿಂದಲೂ ವೈರತ್ವ ಇದೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಲೆಜೆಂಡ್ರಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.