Sunday, September 8, 2024

ಬಾಂಗ್ಲಾ ನಾಗಗಳ ಹಲ್ಲು ಕಿತ್ತ ಟೀಮ್ ಇಂಡಿಯಾ… ಕೊಲಂಬೊದಲ್ಲಿ ಕ್ರಿಕೆಟ್ ದುರುಳರ ಗರ್ವಭಂಗ

ಕೊಲಂಬೊ: ಸಭ್ಯರ ಆಟ, ಶಿಸ್ತಿನ ಆಟ ಕ್ರಿಕೆಟ್‌ಗೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಮಸಿ ಬಳಿಯುತ್ತಾ ಬಂದಿದೆ. ಬಾಂಗ್ಲಾ ಆಟಗಾರರ ಹದ್ದು ಮೀರಿದ ವರ್ತನೆಗಳು ಕ್ರಿಕೆಟ್ ಜಂಟಲ್‌ಮ್ಯಾನ್ ಕ್ರೀಡೆ ಎಂಬುದನ್ನು ಅಣಕವಾಡುತ್ತಿದೆ. ಶ್ರೀಲಂಕಾದಲ್ಲಿ ಮುಕ್ತಾಯಗೊಂಡ ತ್ರಿಕೋನ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು ತೋರಿದ ದುರ್ವರ್ತನೆ, ದುರುಳತನ ಇಡೀ ಕ್ರಿಕೆಟ್ ಜಗತ್ತಿನ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಫೈನಲ್‌ನಲ್ಲಿ ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಟೀಮ್ ಇಂಡಿಯಾ, ಅಶಿಸ್ತು ತೋರಿದ ತಂಡಕ್ಕೆ ಸರಿಯಾದ ಪಾಠವನ್ನೇ ಕಲಿಸಿದೆ.


ಪ್ರೇಮದಾಸ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತಕ್ಕೆ ನಂಬಲಸಾಧ್ಯಗೆಲುವು ತಂದುಕೊಟ್ಟರು. ಈ ಮೂಲಕ ಬಾಂಗ್ಲಾ ಆಟಗಾರರ ಗರ್ವಭಂಗವಾಯಿತು.

PC: Twitter/Ravi Shastri

ಟೂರ್ನಿಯುದ್ದಕ್ಕೂ ಶ್ರೀಲಂಕಾ ವಿರುದ್ಧ 2 ಬಾರಿ ಗೆದ್ದಾಗ ನಾಗಿನ್ ನೃತ್ಯ ಮಾಡಿ ಅಸಭ್ಯತನ ತೋರಿದ್ದ ಬಾಂಗ್ಲಾ ಆಟಗಾರರು, ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಂತೂ ಅಕ್ಷರಶಃ ರಂಪಾಟ ಮಾಡಿದ್ದರು. ಅಂಪೈರ್ ನೋಬಾಲ್ ನೀಡಲಿಲ್ಲ ಎಂದು ಗದ್ದಲವೆಬ್ಬಿಸಿದ ಬಾಂಗ್ಲಾ ದುರುಳರು, ಶಿಸ್ತು ಮೀರಿ ವರ್ತಿಸಿದ್ದರು. ಬಾಂಗ್ಲಾದ ಕೆಲ ಆಟಗಾರರು ಶ್ರೀಲಂಕಾ ಆಟಗಾರರೊಂದಿಗೆ ವಿನಾ ಕಾರಣ ಮಾತಿನ ಚಕಮಕಿ ನಡೆಸಿದ್ದರು. ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರಂತೂ ಜವಾಬ್ದಾರಿ ಮರೆತು ಗಲ್ಲಿ ಕ್ರಿಕೆಟ್ ಆಡೋ ಹುಡುಗರ ರೀತಿ ವರ್ತಿಸಿದ್ದರು. ಇದಕ್ಕೆಲ್ಲಾ ಭಾರತ ತಕ್ಕ ಶಾಸ್ತಿ ಮಾಡಿದೆ.

PC: BCCI

ಫೈನಲ್ ಪಂದ್ಯ ಗೆದ್ದು ನಾಗಿನ್ ನೃತ್ಯ ಮಾಡಲು ರೆಡಿಯಾಗಿದ್ದ ಬಾಂಗ್ಲಾ ನಾಗಗಳ ಹಲ್ಲು ಕಿತ್ತ ಟೀಮ್ ಇಂಡಿಯಾ, ಕ್ರಿಕೆಟ್ ದುರುಳರ ಗರ್ವಭಂಗ ಮಾಡಿದೆ.

Related Articles