Saturday, October 5, 2024

ಫುಟ್ಬಾಲ್ ಅಂಗಣದಲ್ಲಿ ಧೋನಿ-ವಿರಾಟ್ ಕೊಹ್ಲಿ ಮುಖಾಮುಖಿ!

ಮಂಗಳವಾರ ಫುಟ್ಬಾಲ್ ಅಂಗಣದಲ್ಲಿ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಜಿದ್ದಾಜಿದ್ದಿ. ಹೌದು. ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ 2ನೇ ಸೆಮಿಫೈನಲ್ ಪಂದ್ಯದ 2ನೇ ಚರಣದ ಪಂದ್ಯದಲ್ಲಿ ಎಂ.ಎಸ್ ಧೋನಿ ಸಹ ಮಾಲೀಕತ್ವದ ಚೆನ್ನೈಯಿನ್ ಎಫ್‌ಸಿ ಮತ್ತು ವಿರಾಟ್ ಕೊಹ್ಲಿ ಸಹ ಮಾಲೀಕತವ್ದ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಚೆನ್ನೈನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
2015ರ ಫೈನಲ್‌ನಲ್ಲಿ ಮುಖಾಮುಖಿಯ ನಂತರ ಉಭಯ ತಂಡಗಳ ನಡುವಿನ ಸಂಬಂಧ ಹಾಗೆಯೇ ಉಳಿದಿಲ್ಲ. ಆ ಫೈನಲ್‌ನಲ್ಲಿ ಚೆನ್ನೈ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ ಗೋವಾ ವಿರುದ್ಧ ಮತ್ತೊಮ್ಮೆ ಅಂಥದ್ದೇ ಪ್ರದರ್ಶನವನ್ನು ತೋರಿ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ. ಗೋವಾದಲ್ಲಿ ನಡೆದ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯ 1-1ರಲ್ಲಿ ಡ್ರಾಗೊಂಡಿತ್ತು.
‘‘ಪಂದ್ಯದಲ್ಲಿ ಗೆಲ್ಲಲು ನಾವು ಅರ್ಹರಾಗಿದ್ದೆವು. ಅದೊಂದು ಅತ್ಯಂತ ಕಠಿಣ ಡ್ರಾ ಆಗಿತ್ತು. ತವರಿನಾಚೆಯ ಗೋಲು ಅತ್ಯಂತ ಕಡಿಮೆ ಅನುಕೂಲತೆಯನ್ನು ಹೊಂದಿದೆ. ನಾನು ಹೆಚ್ಚು ಹೊತ್ತು ಕುಳಿತು ಯೋಚಿಸುವಂತಹ ಮಹತ್ವವನ್ನು ಅದಕ್ಕೆ ನೀಡುತ್ತಿಲ್ಲ. ಕ್ಲೀನ್‌ಶೀಟ್ ಗಳಿಸಿದರೆ ನಾವು ಫೈನಲ್ ತಲುಪುತ್ತೇವೆ. ಅವರು ಗೋಲು ಗಳಿಸಿದರೆ, ಪರಿಸ್ಥಿತಿ ವಿಭಿನ್ನವಾಗಿರಲಿದ್ದು, ಪಂದ್ಯದಲ್ಲಿ ತುಂಬಾ ಸಾಧ್ಯತೆಗಳಿವೆ,’’ ಎಂದು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಚೆನ್ನೈಯಿನ್ ಎಫ್‌ಸಿ ತಂಡದ ಪ್ರಧಾನ ಕೋಚ್ ಜಾನ್ ಗ್ರೆಗೋರಿ ಹೇಳಿದ್ದಾರೆ.
ಕ್ಲೀನ್‌ಶೀಟ್ ಗೆಲುವಿಗಾಗಿ ಆಡುವುದಕ್ಕೆ ನಮ್ಮ ಆದ್ಯತೆ ಎಂಬುದನ್ನು ಚೆನ್ನೈಯಿನ್ ಎಫ್‌ಸಿ ಕೋಚ್ ಸ್ಪಷ್ಟ ಪಡಿಸಿದ್ದಾರೆ. ಆದರೆ ಒಂದು ವೇಳೆ ಗೋವಾ ಗೋಲು ಗಳಿಸಿದರೆ, ತಮ್ಮ ತಂಡ ಪ್ಲ್ಯಾನ್ ‘ಬಿ’ ಪ್ರಕಾರ ಆಡಲಿದೆ ಎಂದಿದ್ದಾರೆ.
PC: BCCI
ನಾವು ಹಲವು ಬಾರಿ ಮುಖಾಮುಖಿಯಾಗಿದ್ದು, ಎಫ್‌ಸಿ ಗೋವಾದಲ್ಲಿ ಯಾರು ಅಪಾಯಕಾರಿ ಎಂಬುದನ್ನು ಅರಿತಿದ್ದೇವೆ. ಕ್ಲೀನ್‌ಶೀಟ್ ಗಳಿಸಿದರೆ, ನಾವು ಮುನ್ನಡೆಯಲಿದ್ದೇವೆ. ಅದು ನಮ್ಮ ಮೊದಲ ಆದ್ಯತೆ. ಆದರೆ ನಮ್ಮ ಮುಂದಿರುವ ಯಾವುದೇ ಸವಾಲಿಗೆ ನಾವು ಸಿದ್ಧರಾಗಿದ್ದೇವೆ,’’ ಎಂದು ಗ್ರೆಗೋರಿ ಹೇಳಿದ್ದಾರೆ.
ಆತಿಥೇಯ ಚೆನ್ನೈಯಿನ್ ತಂಡ ಅದ್ಭುತ ರಕ್ಷಣಾ ಪಡೆಯನ್ನು ಹೊಂದಿರುವ ಕಾರಣ ಎಫ್‌ಸಿ ಗೋವಾ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಎಲ್ಲರಿಗೂ ಕಾಣದಿರಬಹುದು. ಹಿನ್ಪಡೆಯ ನಾಲ್ವರಲ್ಲಿ ಮೂವರು ವಿದೇಶಿ ಆಟಗಾರರನ್ನು ಬಳಸಿಕೊಂಡ ಏಕೈಕ ತಂಡ ಚೆನ್ನೈಯಿನ್. ಅಲ್ಲದೆ ಎಫ್‌ಸಿ ಗೋವಾದ ಸ್ಟಾರ್ ಸ್ಟ್ರೈಕರ್‌ಗಳಾದ ಫೆರಾನ್ ಕೊರೊಮಿನಾಸ್ ಮತ್ತು ಮ್ಯಾನ್ಯುಯೆಲ್ ಲಾನ್ಜರೊಟ್ ಅವರನ್ನು ಕಟ್ಟಿಹಾಕುವಲ್ಲಿ ಈ ರಕ್ಷಣಾ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.
ಚೆನ್ನೈಯಿನ್ ವಿರುದ್ಧದ ಮೊದಲ ಚರಣದ ಸೆಮಿಫೈನಲ್‌ನಲ್ಲಿ ಲಾನ್ಜರೊಟ್ ಗೋಲು ಗಳಿಸಿದ್ದರು. ಅಲ್ಲದೆ ಕಳೆದ ಬಾರಿ ಚೆನ್ನೈಗೆ ಬಂದಿದ್ದಾಗ ಉತ್ತಮ ಪ್ರದರ್ಶನ ತೋರಿದ್ದರು. ಚೆನ್ನೈಯಿನ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಗೋವಾ ತಂಡ ಮೊದಲ 45 ನಿಮಿಷಗಳಲ್ಲಿ 3 ಗೋಲುಗಳನ್ನು ಗಳಿಸಿತ್ತು.
‘‘ನಾವು ಕಠಿಣ ತಂಡದ ವಿರುದ್ಧ ಹೋರಾಟಬೇಕಿದೆ ಎಂಬುದು ತಿಳಿದಿದೆ. ಚೆನ್ನೈನಲ್ಲಿ ಅವರ ವಿರುದ್ಧ ಆಡಿದಾಗ ಆ ತಂಡ ತುಂಬಾ ವಿಭಿನ್ನವಾಗಿತ್ತು. ಪ್ರಥಮಾರ್ಧದಲ್ಲಿ ನಾವು 3-0 ಮುನ್ನಡೆ ಪಡೆದಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಅಬ್ಬರಿಸಿದ್ದ ಅವರು 2-0ಯಲ್ಲಿ ಮೇಲುಗೈ ಪಡೆದಿದ್ದರು. ನಾವು ಈವರೆಗೆ ಆಡಿದ ಶೈಲಿಯಲ್ಲೇ ಆಡಲಿದ್ದೇವೆ. ಏಕೆಂದರೆ ಅದೇ ಶೈಲಿ ನಮ್ಮನ್ನು ಬಲಿಷ್ಠರನ್ನಾಗಿಸಿದೆ,’’ ಎಂದು ಗೋವಾ ತಂಡದ ಕೋಚ್ ಸರ್ಜಿಯೊ ಲೊಬೆರಾ ತಿಳಿಸಿದ್ದಾರೆ.
ಅಮಾನತಿನಿಂದ ಹೊರ ಬಂದಿರುವ ಗೋಲ್‌ಕೀಪರ್ ನವೀನ್ ಕುಮಾರ್ ಅವರ ಆಗಮನ ಗೋವಾ ತಂಡಕ್ಕೆ ಬಲ ತಂದಿದೆ. ಜೆಮ್ಷೆಡ್‌ಪುರ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಶಿಕ್ಷೆಗೆ ಗುರಿಯಾಗುವ ಮುನ್ನ ನವೀನ್ ಕುಮಾರ್, 3 ಪಂದ್ಯಗಳಲ್ಲಿ 2 ಕ್ಲೀನ್‌ಶೀಟ್ ಸಂಪಾದಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ ಮಿಡ್‌ಫೀಲ್ಡರ್ ಗಾಯಗೊಂಡಿದ್ದರು. ನಾಳಿನ ನಿರ್ಣಾಯಕ ಪಂದ್ಯಕ್ಕೆ ಈ ಇಬ್ಬರೂ ಲಭ್ಯರಿದ್ದಾರೆ ಎಂದು ಲೊಬೆರಾ ಸ್ಪಷ್ಟ ಪಡಿಸಿದ್ದಾರೆ.
‘‘ನಾವು ಈ ಹಿಂದೆ ಆಡಿದ ರೀತಿಯಲ್ಲೇ ಆಡಲಿದ್ದು, ಗೆಲುವಿಗಾಗಿ ಆಡಲಿದ್ದೇವೆ. ಜೆಮ್ಷೆಡ್‌ಪುರ್ ವಿರುದ್ಧದ ಪಂದ್ಯದಲ್ಲಿ ನಮಗೆ ಡ್ರಾ ಸಾಕಾಗಿತ್ತು. ಆದರೆ ನಾವು ಗೆಲುವಿಗಾಗಿ ಆಡಿದೆವು,’’ ಎಂದು ಲೊಬೆರಾ ನುಡಿದಿದ್ದಾರೆ.

Related Articles