ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನ ಉದ್ದಗಲಗಳಲ್ಲಿ ಹಾರಿಸಿರುವ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧೂ ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಾಕ್ ನೀಡಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಮುಂಬರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಕ್ರೀಡಾಪಟುಗಳು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಕರೆದೊಯ್ಯುವಂತಿಲ್ಲ ಎಂದು ಕ್ರೀಡಾ ಇಲಾಖೆ ಆದೇಶಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯದ ಈ ನಿರ್ಧಾರ ಮುಖ್ಯವಾಗಿ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧೂ ಅವರಿಗೆ ಆಘಾತ ತಂದಿದೆ. ಏಕೆಂದರೆ ಈ ಇಬ್ಬರು ಶಟ್ಲರ್ ಜಗತ್ತಿನ ಎಲ್ಲೇ ಬ್ಯಾಡ್ಮಿಂಟನ್ ಆಡಲು ತೆರಳಿದರೂ, ತಮ್ಮೊಂದಿಗೆ ಹೆತ್ತವರನ್ನು ಕರೆದುಕೊಂಡು ಹೋಗುತ್ತಿದ್ದರು.
ಸೈನಾ ತಮ್ಮೊಂದಿಗೆ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಅವರನ್ನು ಕರೆದೊಯ್ದರೆ, ಸಿಂಧೂ ತಮ್ಮ ತಾಯಿ ಪಿ.ವಿಜಯಾ ಅವರನ್ನು ಕರೆದೊಯ್ಯುತ್ತಿದ್ದರು. ಆದರೆ ಅನಗತ್ಯ ವೆಚ್ಚಕ್ಕೆ ಕತ್ತರಿ ಹಾಕುವ ನಿಟ್ಟಿನಲ್ಲಿ ಕಾಮನ್ವೆಲ್ತ್ ಗೇಮ್ಸ್‌ಗೆ ಕ್ರೀಡಾಪಟುಗಳೊಂದಿಗೆ ಕುಟುಂಬ ಸದಸ್ಯರ ಪ್ರಯಾಣವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ.