Saturday, July 27, 2024

ಟೀಮ್ ಇಂಡಿಯಾ ಬತ್ತಳಿಕೆ ಸೇರಿದೆ ಹೊಸ ಅಸ್ತ್ರ.. ವಿರಾಟ್ ಕೊಹ್ಲಿ ಫುಲ್ ಖುಷ್!

ಬೆಂಗಳೂರು: ಹೊಸ ಬೌಲಿಂಗ್ ಅಸ್ತ್ರವೊಂದು ಟೀಮ್ ಇಂಡಿಯಾ ಬತ್ತಳಿಕೆ ಸೇರಿದೆ. ಆ ಅಸ್ತ್ರ ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಬೇಟೆಯಾಡುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಆ ಅಸ್ತ್ರ ಭಾರತದ ಟ್ರಂಪ್‌ಕಾರ್ಡ್ ಆಗಿ ಕಾಣಿಸಿಕೊಳ್ಳುತ್ತಿದೆ. ಅದು ಬೇರಾರೂ ಅಲ್ಲ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ತಮಿಳುನಾಡಿನ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್.
ಹೌದು. ವಾಷಿಂಗ್ಟನ್ ಸುಂದರ್ ಎಂಬ ಪ್ರತಿಭೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಕೆಲವೇ ತಿಂಗಳುಗಳಲ್ಲಿ ತನ್ನ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟಿದೆ. ಭಾರತ ಟಿ20 ತಂಡದಲ್ಲಿ ಮಿಂಚುತ್ತಿರುವ ವಾಷಿಂಗ್ಟನ್ ಸುಂದರ್, ತಮ್ಮ ಕರಾರುವಾಕ್ ಆಫ್ ಸ್ಪಿನ್  ದಾಳಿಯಿಂದ ಗಮನ ಸೆಳೆಯುತ್ತಿದ್ದಾರೆ.
PC: BCCI
ಹೊಸ ಚೆಂಡಿನಲ್ಲಿ ದಾಳಿಗಿಳಿದು ವಿಕೆಟ್ ಬೇಟೆಯಾಡುತ್ತಿರುವ ವಾಷಿಂಗ್ಟನ್ ಸುಂದರ್, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ಫೈನಲ್ ತಲುಪಲು ಕಾರಣರಾಗಿದ್ದಾರೆ.
ಶ್ರೀಲಂಕಾ ತ್ರಿಕೋನ ಸರಣಿಯ 4 ಪಂದ್ಯಗಳೂ ಸೇರಿದಂತೆ ಇಲ್ಲಿಯವರೆಗೆ 5 ಟಿ20 ಪಂದ್ಯಗಳನ್ನಾಡಿರುವ ವಾಷಿಂಗ್ಟನ್ ಸುಂದರ್, 5.80 ಎಕಾನಮಿಯಲ್ಲಿ 8 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ತಾವು ಟೀಮ್ ಇಂಡಿಯಾ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಯಶಸ್ಸು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಏಕೆಂದರೆ ಏಪ್ರಿಲ್ 7ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಾಷಿಂಗ್ಟನ್ ಸುಂದರ್, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ತಂಡ ವಾಷಿಂಗ್ಟನ್ ಸುಂದರ್ ಅವರನ್ನು 3.20 ಕೋಟಿ ರೂ.ಗಳಿಗೆ ಖರೀದಿತ್ತು.
ಕಳೆದ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ಪರ ಆಡಿ ಗಮನ ಸೆಳೆದಿದ್ದರು.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಸಾಧನೆ
ಪಂದ್ಯ 05
ಓವರ್ 20
ರನ್ 115
ವಿಕೆಟ್ 08
ಎಕಾನಮಿ 5.80
ಬೆಸ್ಟ್ 3/22

Related Articles