Thursday, December 12, 2024

ಟಿ20: ಸ್ಮೃತಿ ಮಂಧಾನ ಸಿಡಿಲಬ್ಬರದ ಬ್ಯಾಟಿಂಗ್… ಇಂಗ್ಲೆಂಡ್ ವಿರುದ್ಧ ಭಾರತ ರನ್ ಮಳೆ

ಟಿ20: ಸ್ಮೃತಿ ಮಂಧಾನ ಸಿಡಿಲಬ್ಬರದ ಬ್ಯಾಟಿಂಗ್… ಇಂಗ್ಲೆಂಡ್ ವಿರುದ್ಧ ಭಾರತ ರನ್ ಮಳೆ
ಮುಂಬೈ: ಕ್ರಿಕೆಟ್ ಕ್ಲಬ್ ಆ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ತ್ರಿಕೋನ ಟಿ20 ಸರಣಿಯ ತನ್ನ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಬೃಹತ್ ಮೊತ್ತ ದಾಖಲಿಸಿದೆ.

PC: Twitter/Smriti Mandhana
ಸೂಪರ್ ಸಂಡೇ ಬ್ರೆಬೌರ್ನ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಅತೀ ಹೆಚ್ಚಿನ ಮೊತ್ತವಾಗಿದೆ. ಅಲ್ಲದೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 2ನೇ ಅತೀ ಹೆಚ್ಚಿನ ಮೊತ್ತ.
ಬ್ರೆಬೌರ್ನ್ ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವಿತ್ತ ಎಡಗೈ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಕೇವಲ 40 ಎಸೆತಗಳಲ್ಲಿ 76 ರನ್ ಸಿಡಿಸಿದರು. ಮಹಾರಾಷ್ಟ್ರದ ಸಾಂಗ್ಲಿಯವರಾದ ಮಂಧಾನ ಅವರ ಸೊಓೀಂಟಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಹಾಗೂ 2 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು. ಮಂಧಾನ ತಮ್ಮ 76 ರನ್‌ಗಳಲ್ಲಿ 60 ರನ್‌ಗಳನ್ನು ಬೌಂಡರಿ-ಸಿಕ್ಸರ್‌ಗಳ ಮೂಲಕವೇ ಗಳಿಸಿದರು.
ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ 21 ವರ್ಷದ ಮಂಧಾನ, ಭಾರತ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 4ನೇ ಅರ್ಧಶತಕ ಸಿಡಿಸಿದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಮಂಧಾನ, ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಅಬ್ಬರದ 67 ರನ್ ಸಿಡಿಸಿದ್ದರು.
ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರೊಂದಿಗೆ ಮಂಧಾನ ಮೊದಲ ವಿಕೆಟ್‌ಗೆ 77 ಎಸೆತಗಳಲ್ಲಿ 129 ರನ್ ಸೇರಿಸಿ ಭಾರತದ ಬೃಹತ್ ಮೊತ್ತಕ್ಕೆ ಭದ್ರ ಅಡಿಪಾಯ ನಿರ್ಮಿಸಿಕೊಟ್ಟರು. 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮಿಥಾಲಿ ರಾಜ್, ಅಂತಿಮವಾಗಿ 42 ಎಸೆತಗಳಲ್ಲಿ 7 ಬೌಂಡರಿಗಳನ್ನೊಳಗೊಂಡ 53 ರನ್ ಗಳಿಸಿ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 4 ಬೌಂಡರಿಗಳನ್ನು ಬಾರಿಸಿದ 18 ವರ್ಷದ ಯುವ ಆಲ್ರೌಂಡರ್ ಪೂಜಾ ವಸ್ತ್ರಕರ್ 10 ಎಸೆತಗಳಲ್ಲಿ ಅಜೇಯ 22 ರನ್ ಸಿಡಿಸಿದರು.
ಸ್ಮೃತಿ ಮಂಧಾನ ಬ್ಯಾಟಿಂಗ್ ಮೋಡಿ
ರನ್ 76
ಎಸೆತ 40
ಬೌಂಡರಿ 12
ಸಿಕ್ಸರ್ 02
ಸ್ಮೃತಿ ಮಂಧಾನ ವೇಗದ ಅರ್ಧಶತಕ ದಾಖಲೆ
* 25 ಎಸೆತಗಳಲ್ಲಿ ಸ್ಮತಿ ಮಂಧಾನ ಅರ್ಧಶತಕ
* ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ವೇಗದ ಅರ್ಧಶತಕ
* ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಷ್ಯಾ ಪರ ವೇಗದ ಅರ್ಧಶತಕ
* ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 3ನೇ ವೇಗದ ಅರ್ಧಶತಕ

Related Articles