ಮುಂಬೈ: ತ್ರಿಕೋನ ಟಿ20 ಸರಣಿಯಲ್ಲಿ ಭಾರತದ ಮಹಿಳಾ ತಂಡ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ. ಭಾರತ ಸತತ 3 ಸೋಲುಗಳನ್ನು ಕಂಡಿರುವದರಿಂದ ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಿವೆ.
ಕ್ರಿಕೆಟ್ ಕ್ಲಬ್ ಆ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳ ಸೋಲುಂಡರು. ಈ ಮೂಲಕ ಪ್ರಸಕ್ತ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ವನಿತೆಯರು ಆತಿಥೇಯರ ವಿರುದ್ಧ ಸತತ 6ನೇ ಗೆಲುವು ದಾಖಲಿಸಿದರು. ಟಿ20 ಸರಣಿಗೂ ಮುನ್ನ ನಡೆದಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಆಸೀಸ್ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತ್ತು.
ತನ್ನ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಕಾಂಗರೂಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ಆಟಗಾರ್ತಿ ಬೆಥ್ ಮೂನಿ 46 ಎಸೆತಗಳಲ್ಲಿ 71 ರನ್ ಸಿಡಿಸಿದರೆ, ಎಲೈಸ್ ವಿಲಾನಿ 42 ಎಸೆತಗಳಲ್ಲಿ 61 ರನ್ ಬಾರಿಸಿದರು.
ನಂತರ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. 16 ವರ್ಷದ ಯುವ ಆರಂಭಿಕ ಆಟಗಾರ್ತಿ ಜೆಮಿಮಾ ರಾಡ್ರಿಗ್ಸ್ 41 ಎಸೆತಗಳಲ್ಲಿ 8 ಬೌಂಡರಿಗಳನ್ನೊಳಗೊಂಡ 50 ರನ್ ಸಿಡಿಸಿ ಭಾರತ ಪರ ಏಕಾಂಗಿ ಹೋರಾಟ ನಡೆಸಿದರು. ಇದು ಅಂತರಾಷ್ಟ್ರೀಯ ಟಿ20ಯಲ್ಲಿ ಜೆಮಿಮಾ ಗಳಿಸಿದ ಚೊಚ್ಚಲ ಅರ್ಧಶತಕವಾಗಿದೆ. ಆದರೆ ಉತ್ತಮ ಫಾರ್ಮ್‌ನಲ್ಲಿದ್ದ ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ 15 ರನ್‌ಗಳಾಗುವಷ್ಟರಲ್ಲಿ ಔಟಾಗಿದ್ದು ಭಾರತಕ್ಕೆ ಹೊಡೆತ ನೀಡಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 186 ರನ್
ಬೆಥ್ ಮೂನಿ 71, ಎಲೈಸ್ ವಿಲಾನಿ 61; ಪೂಜಾ 2/28, ರಾಧಾ ಯಾದವ್ 1/39.
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 150 ರನ್
ಜೆಮಿಮಾ ರಾಡ್ರಿಗ್ಸ್ 50, ಹರ್ಮನ್‌ಪ್ರೀತ್ ಕೌರ್ 33; ಮೆಗಾನ್ ಶುಟ್ 3/31, ಡೆಲಿಸ್ಸಾ ಕಿಮ್ಮಿನ್ಸ್ 1/27.