ಗೋವಾದಲ್ಲಿ ಸಮಬಲದ ಹೋರಾಟ
ಗೋವಾ, ಫೆಬ್ರವರಿ 4
ಆತಿಥೇಯ ಎಫ್‌ಸಿ ಗೋವಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಪ್ರಥಮಾರ್ಧ ಹಾಗೂ ದ್ವಿತಿಯಾರ್ಧದಲ್ಲಿ ತಲಾ 2 ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್‌ನ 64ನೇ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು.
ದ್ವಿತಿಯಾರ್ಧದಲ್ಲೂ ರೋಚಕ
ಹ್ಯಾಟ್ರಿಕ್ ಗೋಲು ಗಳಿಕೆಯಲ್ಲಿ ನಿಸ್ಸೀಮ, ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಕೆಯ ಸರದಾರ ಫರಾನ್ ಕೊರೊಮಿನಾಸ್ ಮತ್ತೊಮ್ಮೆ ಮಿಂಚಿದರು. 53ನೇ ನಿಮಿಷದಲ್ಲಿ ಲಾನ್ಜರೋಟ್ ನೀಡಿದ ಮಿಂಚಿನ ಪಾಸ್ ಮೂಲಕ ಎಡಗಾಲಿನಿಂದ ಚೆಂಡನ್ನು ತುಳಿದು ಗೋಲು ಗಳಿಸಿದ ಕೊರೊಮಿನಾಸ್, ಚಾಂಪಿಯನ್‌ಷಿಪ್‌ನಲ್ಲಿ 13ನೇ ಗೋಲು ಗಳಿಕೆಯ ಸಾಧನೆ ಮಾಡಿದರು. ನಾರ್ತ್ ಈಸ್ಟ್ ಇದೇ ಮೊದಲ ಬಾರಿಗೆ ಗೋವಾ ವಿರುದ್ಧ ಸಮಬಲದ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು. ಜಾನ್ ಮಾಸ್ಕ್ವೆರಾ 71ನೇ ನಿಮಿಷದಲ್ಲಿ ಗಳಿಸಿದ ಗೋಲು ಮತ್ತೊಮ್ಮೆ ಇತ್ತಂಡಗಳ ಹೋರಾಟ ಸಮಬಗೊಳ್ಳುವಂತೆ ಮಾಡಿತು. ರಾಲಿನ್ ಬೋರ್ಗಸ್ ನೀಡಿದ ನೀಡಿದ ಪಾಸ್ ಮೂಲಕ ದಾಖಲಾದ ಈ ಗೋಲು ನಾರ್ತ್ ಈಸ್ಟ್ ತಂಡ ಮತ್ತೆ ಹೋರಾಟದಲ್ಲಿ ಮುಂದುವರಿಯುವಂತೆ ಮಾಡಿತು.
ಸಮಬಲದ ಹೋರಾಟ
ಪ್ರಥಮಾರ್ಧದ ಕೊನೆಯ ನಾಲ್ಕು ನಿಮಿಷಗಳಲ್ಲಿ ಇತ್ತಂಡಗಳು ತಲಾ ಒಂದು ಗೋಲು ಗಳಿಸುವ ಮೂಲಕ 45 ನಿಮಿಷಗಳ ಆಟ 1-1 ಗೋಲಿನಿಂದ ಸಮಬಲಗೊಂಡಿತು. ಪುಣೆ ತಂಡದ ನಾಯಕ, ಗೋಲ್‌ಕೀಪರ್ ಕಟ್ಟಿಮನಿ ಉತ್ತಮ ರೀತಿಯಲ್ಲಿ ಗೋಲನ್ನು ತಡೆಯದೇ ಇರುತ್ತಿದ್ದರೆ ನಾರ್ತ್ ಈಸ್ಟ್ ಯುನೈಟೆ ಡ್ ತಂಡ 31ನೇ ನಿಮಿಷದಲ್ಲೇ ಮುನ್ನಡೆ ಕಂಡುಕೊಳ್ಳುತ್ತಿತ್ತು. ಕಟ್ಟಿಮನಿ ನಾಯಕನ ಜವಾಬ್ದಾರಿ ಗೋವಾ ತಂಡದ ಪ್ರೇಕ್ಷಕರ ಮನ ಗೆಲ್ಲುವಂತೆ ಮಾಡಿತು.
ಗಾಯದಿಂದ ಚೇತರಿಸಿಕೊಂಡು ಮತ್ತೆ ಅಂಗಣದಲ್ಲಿ ಕಾಣಿಸಿಕೊಂಡ ಮಂದಾರ್ ರಾವ್ ದೇಸಾಯಿ 42ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಗೋವಾ 1-0 ಅಂತರದಲ್ಲಿ ಮುನ್ನಡೆ ಕಂಡಿತು. ಜೊನಾಥನ್ ಕಾರ್ಡೋಜೊ ನೀಡಿದ ಪಾಸ್ ಗೋಲ್ ಬಾಕ್ಸ್‌ನ ಇನ್ನೊಂದು ಅಂಚಿ ಸಾಗುತ್ತಿತ್ತು, ಆಗ ಮಂದಾರ ಉತ್ತಮ ರೀತಿಯಲ್ಲಿ ತುಳಿದ ಪರಿಣಾಮ ಚೆಂಡು ಗೋಲ್ ಬಾಕ್ಸ್ ಸೇರಿತ್ತು. ಮಂದಾರ ದೇಸಾಯಿ ಸ್ಥಳೀಯ ಆಟಗಾರ. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಗೋಲ್ ಗಳಿಸಿದ್ದನ್ನು ಗೋವಾ ಅಭಿಮಾನಿಗಳು ಸಂಭ್ರಮಸಿದರು.
ಆದರೆ ಈ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ನಾಲ್ಕು ನಿಮಿಷ ಕಳೆಯುತ್ತಿದ್ದಂತೆ ನಾರ್ತ್ ಈಸ್ಟ್ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಪ್ರಥಮಾರ್ಧದ ಅಂಚಿನಲ್ಲಿ ಮಾರ್ಸಿನೋ ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಸಮಬಲ ಸಾಧಿಸಿ ಗೋವಾ ಪ್ರೇಕ್ಷಕರನ್ನು ವೌನಕ್ಕೆ ಸರಿಯುವಂತೆ ಮಾಡಿತು. ರೇಗನ್ ಸಿಂಗ್ ಬಲಭಾಗದಿಂದ ನೀಡಿದ ಪಾಸ್ ಸಿಜಾರಿಯೊ ಮೂಲಕ ಮುಂದೆ ಸಾಗಿತು. ಹಲಿಚರಣ್ ನಾರ್ಜರಿ ಉತ್ತಮ ರೀತಿಯಲ್ಲಿ ಚೆಂಡನ್ನು ನಿಯಂತ್ರಿಸಿ ಮಾರ್ಸಿನೋಗೆ ನೀಡಿದರು ಮಾರ್ಸಿನೊ ತಂಡದ ಪರ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.
ಇದುವರೆಗಿನ ಭಾನುವಾರಕ್ಕಿಂತ ಈ ಫೆಬ್ರವರಿ 4ರ ಭಾನುವಾರ ವಿಭಿನ್ನವಾಗಿತ್ತು. ಏಕೆಂದರೆ ಎರಡು ಪಂದ್ಯಗಳ ಬದಲಿಗೆ ಒಂದೇ ಪಂದ್ಯಕ್ಕೆ ಅವಕಾಶ. ಕುತೂಹಲ ಹೆಚ್ಚಿಸುವ ಸಲುವಾಗಿ ಈ ಯೋಜನೆ. ನೆಹರು ಕ್ರೀಡಾಂಗಣದಲ್ಲಿ ಆತಿಥೇಯ ಎಫ್‌ಸಿ ಗೋವಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ಮುಖಾಮುಖಿಯಾದವು. ಇತ್ತಂಡಗಳು ಇದುವರೆಗೂ ಏಳು ಬಾರಿ ಮುಖಾಮುಖಿಯಾಗಿವೆ. ಗೋವಾ ತಂಡ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಮುನ್ನಡೆ ಕಂಡಿದೆ.