ಮುಂಬೈ: ಅವರಿಬ್ಬರೂ ಅದ್ಭುತ ಪ್ರತಿಭಾವಂತರು. ಆಟದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದ ಪ್ರಚಂಡರು. ಅವರಲ್ಲಿ ಒಬ್ಬ ಸರಿಯಾದ ದಾರಿಯಲ್ಲಿ ನಡೆದು ಕ್ರಿಕೆಟ್ ಜಗತ್ತಿನ ಅಧಿಪತಿಯಾದರೆ, ತಪ್ಪು ದಾರಿ ತುಳಿದ ಮತ್ತೊಬ್ಬ ತನ್ನ ಕ್ರಿಕೆಟ್ ಭವಿಷ್ಯಕ್ಕೆ ತಾನೇ ಕೊಳ್ಳಿಯಿಟ್ಟುಕೊಂಡ.
ಹೌದು. ನಾವು ಹೇಳುತ್ತಿರುವ ಕಥೆ 80ರ ದಶಕದಲ್ಲಿ ಮುಂಬೈ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರ ಬಗ್ಗೆ.
ಸಚಿನ್ ಮತ್ತು ಕಾಂಬ್ಳಿ ವಿಚಾರ ಈಗೇಕೆ ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಕಾರಣವೂ ಇದೆ.
ಬಾಲ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು, ಒಂದಾಗಿ ಆಡಿದ ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆರಗುವ ಮೂಲಕ ವಿನೋದ್ ಕಾಂಬ್ಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ಮುಂಬೈ ಲೀಗ್‌ನ ಫೈನಲ್ ಪಂದ್ಯ ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಚಿನ್ ಆಗಮಿಸಿದ್ದರು. ಆಗ ಅಲ್ಲಿಗೆ ಬಂದ ಕಾಂಬ್ಳಿ ಎಲ್ಲರೂ ಅಚ್ಚರಿ ಪಡುವಂತೆ ಸಚಿನ್ ಅವರ ಕಾಲಿಗೆ ನಮಸ್ಕರಿಸಿದರು.
ಅಷ್ಟಕ್ಕೂ ಸಚಿನ್‌ಗಿಂತ ಕಾಂಬ್ಳಿ ವಯಸ್ಸಿನಲ್ಲಿ ದೊಡ್ಡವರು. ಸಚಿನ್‌ಗೆ 44 ವರ್ಷ, ಕಾಂಬ್ಳಿಗೆ 46 ವರ್ಷ. ಆದರೂ ತುಂಬಾ ಸಮಯದ ನಂತರ ಬಾಲ್ಯ ಸ್ನೇಹಿತನನ್ನು ಭೇಟಿ ಮಾಡಿದ ಕಾಂಬ್ಳೆ, ಉದ್ವೇಗ ತಾಳಲಾರದೆ ಸಚಿನ್ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಕಾಲಿಗೆರಗಿದ ಗೆಳೆಯನ್ನು ಹಿಡಿದಜು ಮೇಲೆತ್ತಿದ ಸಚಿನ್, ಕಾಂಬ್ಳಿ ಅವರನ್ನು ತಬ್ಬಿಕೊಂಡರು. ಬಾಲ್ಯದ ಗೆಳೆಯರ ಈ ಸಮ್ಮಿಲನ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಮುಂಬೈನ ಶಾರದಾಶ್ರಮ ಶಾಲೆಯಲ್ಲಿ ಓದುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಶಾಲಾ ಟೂರ್ನಿಯ ಪಂದ್ಯವೊಂದರಲ್ಲಿ 664 ರನ್‌ಗಳ ವಿಶ್ವದಾಖಲೆಯ ಜೊತೆಯಾಟವಾಡಿದ್ದ ಪ್ರಚಂಡರು.ಈ ಮೂಲಕ ಈ ಪ್ರತಿಭಾವಂತರ ಕ್ರಿಕೆಟ್ ಭವಿಷ್ಯಕ್ಕೆ ಭದ್ರ ಬುನಾದಿ ಸಿಕ್ಕಿತ್ತು. ಆದರೆ ಆ ಬುನಾದಿಯಲ್ಲಿ ಸಚಿನ್ ತೆಂಡೂಲ್ಕರ್ ಭವ್ಯ ಭವಿಷ್ಯ ಕಂಡುಕೊಂಡರೆ, ವಿನೋದ್ ಕಾಂಬ್ಳಿ ಅಡ್ಡ ದಾರಿ ಹಿಡಿದರು. ಮಾತ್ರ ತಮ್ಮ ಒರಟು ಸ್ವಭಾವ, ಅಶಿಸ್ತಿನ ವರ್ತನೆಗಳಿಂದ ಸುದ್ದಿಯಾಗುತ್ತಾ ಹೋದ ಕಾಂಬ್ಳಿ ದುಶ್ಚಟಗಳ ದಾಸನಾದರು.
ಆದರೂ ಸಚಿನ್ ತೆಂಡೂಲ್ಕರ್ ತಮ್ಮ ಗೆಳೆಯನನ್ನು ಕೈಬಿಡದೆ ಭಾರತ ತಂಡದ ಪರ ಆಡುವಂತೆ ಮಾಡಿದರು. ಪ್ರತಿಭೆಯ ಆಗರವಾಗಿದ್ದ ಕಾಂಬ್ಳಿ ಆಡಿದ 17 ಟೆಸ್ಟ್ ಪಂದ್ಯಗಳಲ್ಲಿ ಎರಡು ದ್ವಿಶತಕಗಳನ್ನು ಸಿಡಿಸಿ ಆಟದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನೂ ಮೀರಿಸುವ ಹಾದಿಯಲ್ಲಿ ಮುನ್ನಡೆದದ್ದು ಸತ್ಯ.
ಟೆಸ್ಟ್ ಕ್ರಿಕೆಟ್‌ನಲ್ಲಿ 54ಕ್ಕೂ ಹೆಚ್ಚಿನ ಸರಾಸರಿ ಹೊಂದಿದ್ದ ಅತ್ಯದ್ಭುತ ಎಡಗೈ ಬ್ಯಾಟ್ಸ್‌ಮನ್ ಕಾಂಬ್ಳಿ, ಶಿಸ್ತನ್ನು ಮೈಗೂಡಿಸಿಕೊಂಡಿದ್ದರೆ ಸಚಿನ್ ಅವರನ್ನು ಮೀರಿಸಬಹುದಿತ್ತೇನೋ?. ಆದರೆ ಹಾಗಾಗಲಿಲ್ಲ. ಅಡ್ಡ ದಾರಿ ಹಿಡಿದಿದ್ದ ಕಾಂಬ್ಳಿ ಇದಕ್ಕೆ ತಕ್ಕ ಬೆಲೆಯನ್ನೂ ತೆರಬೇಕಾಯಿತು. ಭಾರತ ತಂಡದಲ್ಲಿ ಕಾಂಬ್ಳಿ ಸ್ಥಾನ ಕಳೆದುಕೊಂಡರು. ಆಗ ಗೆಳೆಯ ಸಚಿನ್ ತಮ್ಮ ನೆರವಿಗೆ ಬರುತ್ತಾರೆ ಎಂಬ ಕಾಂಬ್ಳಿ ನಿರೀಕ್ಷೆ ಸುಳ್ಳಾಯಿತು.
ಒಂದು ಹಂತದವರೆಗೆ ಕಾಂಬ್ಳಿಯನ್ನು ಸಮರ್ಥಿಸಿಕೊಂಡ ಸಚಿನ್ ಬರ ಬರುತ್ತಾ ಕಾಂಬ್ಳಿಯಿಂದ ದೂರ ಉಳಿದರು. ಇದು ಸರಿಯಾದ ಕ್ರಮವೂ ಆಗಿತ್ತು. ಆದರೆ ಇದೇ ಕಾರಣಕ್ಕೆ ಸಚಿನ್ ಅವರ ಮೇಲೆ ಕೋಪಿಸಿಕೊಂಡ ಕಾಂಬ್ಳಿ, ಸಾರ್ವಜನಿಕ ವೇದಿಕೆಗಳಲ್ಲಿ ಸಚಿನ್ ಅವರನ್ನು ದೂಷಿಸಲು ಆರಂಭಿಸಿದರು. ಇದರಿಂದ ಗೆಳೆಯರ ನಡುವಿನ ಅಂತರ ಮತ್ತಷ್ಟು ಹೆಚ್ಚುತ್ತಾ ಹೋಯಿತು.
ಆದರೆ ಕಾಲ ಕ್ರಮೇಣ ಕಾರ್ಮೋಡ ಸರಿದು ಇಬ್ಬರ ನಡುವೆ ಮತ್ತೆ ಬಾಂಧವ್ಯ ಬೆಳೆಯಲಾರಂಭಿಸಿತು. ಸಾರ್ವಜನಿಕ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸಚಿನ್ ಅವರನ್ನು ಹೊಗಳಲು ಶುರು ಮಾಡಿದರು ಕಾಂಬ್ಳಿ. ಇದೀಗ ಗೆಳೆಯನನ್ನು ನೋಡುತ್ತಲೇ ಉದ್ವೇಗದಿಂದ ಕಾಂಬ್ಳಿ ಸಚಿನ್ ಅವರ ಕಾಲಿಗೆರಗಿದ್ದಾರೆ. ಇದೇನೇ ಇದ್ದರೂ, ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ಅವರ ಗರಡಿಯಲ್ಲಿ ಪಳಗಿದ್ದ ಇಬ್ಬರು ಪ್ರತಿಭಾವಂತ ಹುಡುಗರು ವಿಭಿನ್ನ ಹಾದಿಯಲ್ಲಿ ಸಾಗಿ ಯಶಸ್ಸು ಮತ್ತು ವೈಫಲ್ಯಗಳಿಗೆ ನಿದರ್ಶನವಾಗಿ ನಿಂತಿದ್ದಾರೆ.