Thursday, December 12, 2024

ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ… ಇದು ಕೊಹ್ಲಿ-ವ್ಯಾಟ್ ಪ್ರೇಮ ಪ್ರಸಂಗ!

ಬೆಂಗಳೂರು: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದು ಅರ್ಥಪೂರ್ಣ ಮಾತು. ಆದರೆ ಈಗ ಕಾಲ ಬದಲಾಗಿದೆ. ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವಂತೆ. ಹೀಗಂತ ಹೇಳಿದ್ದಾರೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕೇಟ್ ಕ್ರಾಸ್. ಆಕೆ ಈ ರೀತಿ ಹೇಳಿರುವುದು ಯಾರ ಬಗ್ಗೆ ಗೊತ್ತಾ… ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಡೇನಿಯೆಲ್ ವ್ಯಾಟ್ ಬಗ್ಗೆ.
PC: Twitter/Danielle Wyatt/Virat Kohli
ಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ತ್ರಿಕೋನ ಟಿ20 ಟೂರ್ನಿಯ ಪಂದ್ಯದಲ್ಲಿ ಭಾನುವಾರ ಭಾರತ ವಿರುದ್ಧ ಡೇನಿಯೆಲ್ ವ್ಯಾಟ್ ಕೇವಲ 64 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ಸಹಿತ 124 ರನ್ ಸಿಡಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು.
ಭಾರತ ಒಡ್ಡಿದ 199 ರನ್‌ಗಳ ಕಠಿಣ ಗುರಿಯನ್ನು ವ್ಯಾಟ್ ಅವರ ಶತಕದ ನೆರವಿನಿಂದ ಇಂಗ್ಲೆಂಡ್ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಮೆಟ್ಟಿ ನಿಂತಿತ್ತು. ಸ್ಫೋಟಕ ಆಟವಾಡಿದ್ದ ವ್ಯಾಟ್ ಕೇವಲ 52 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ್ದರು. ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎಂಬ ಕೇಟ್ ಕ್ರಾಸ್ ಮಾತಿನ ಮರ್ಮ ಅಡಗಿರುವುದು ಇಲ್ಲೇ.
PC: Twitter/Virat kohli/Wyatt
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಂತ ವೇಗದ ಶತಕವನ್ನು 52 ಎಸೆತಗಳಲ್ಲೇ ದಾಖಲಿಸಿದ್ದಾರೆ. ಇದೀಗ ವ್ಯಾಟ್ ಅಷ್ಟೇ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
ಇದಕ್ಕೂ ಮೊದಲು 2014ರಲ್ಲಿ ತಮ್ಮನ್ನು ಮದುವೆಯಾಗುವಂತೆ ವಿರಾಟ್ ಕೊಹ್ಲಿ ಅವರಿಗೆ ಡೇನಿಯೆಲ್ ವ್ಯಾಟ್ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ನಂತರ 2014ರ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ವ್ಯಾಟ್ ಅವರನ್ನು ಭೇಟಿಯಾಗಿದ್ದ ಕೊಹ್ಲಿ ತಮ್ಮ ಬ್ಯಾಟ್ ಒಂದನ್ನು ವ್ಯಾಟ್‌ಗೆ ಉಡುಗೊರೆಯಾಗಿ ನೀಡಿದ್ದರು. ವಿರಾಟ್ ಉಡುಗೊರೆಯಾಗಿ ನೀಡಿದ್ದ ಆ ಬ್ಯಾಟ್‌ನಲ್ಲೇ ಡೇನಿಯೆಲ್ ವ್ಯಾಟ್ ಭಾನುವಾರ ಶತಕ ಬಾರಿಸಿದ್ದಾರೆ.
PC: Twitter/Danielle Waytt
ಮೊದಲು ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ, ನಂತರ ಕೊಹ್ಲಿ ಅವರಿಂದ ಬ್ಯಾಟ್ ಉಡುಗೊರೆ, ಬಳಿಕ ಅದೇ ಬ್ಯಾಟ್‌ನಲ್ಲಿ ಆಡಿದ ವ್ಯಾಟ್… ವಿರಾಟ್ ಕೊಹ್ಲಿ ಅವರಂತೆ 52 ಎಸೆತಗಳಲ್ಲಿ ಶತಕ ಸಾಧನೆ. ಇವೆಲ್ಲವನ್ನೂ ತಾಳೆ ಹಾಕಿರುವ ಕೇಟ್ ಕ್ರಾಸ್, ಲವ್ ಸ್ಟೋರಿ… ಸ್ವರ್ಗ ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ.
PC: Twitter/Kate Cross
ಕೇಟ್ ಕ್ರಾಸ್ ಅವರ ಟ್ವೀಟ್‌ಗೆ ನಾಚಿ ನೀರಾಗಿರುವ ಡೇನಿಯೆಲ್ ವ್ಯಾಟ್ ನಗು ಮೊಗದ ಸಂಕೇತಗಳನ್ನು ಟ್ವೀಟ್ ಮಾಡಿದ್ದಾರೆ.

Related Articles