Thursday, September 12, 2024

ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಪದಕ ತಂದ ಕುಂದಾಪುರದ ಯುವಕ, ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ‘ಬೆಳ್ಳಿತಾರೆ’

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಆರಂಭಗೊಂಡಿದೆ. ಕನ್ನಡಿಗ ಗುರುರಾಜ್ ಪೂಜಾರಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.
PC: Twitter/Doordarshan Sports
ಗುರುವಾರ ನಡೆದ ಪುರುಷರ 56 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ್ ಪೂಜಾರಿ 2ನೇ ಸ್ಥಾನ ಪಡೆದ ಗುರುರಾಜ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಸ್ನ್ಯಾಚ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 111 ಕೆಜಿ ಭಾರತ ಎತ್ತಿದ 28 ವರ್ಷದ ಗುರುರಾಜ್, ಕ್ಲೀನ್ ಮತ್ತು ಜರ್ಕ್‌ನಲ್ಲಿ 138 ಕೆಜಿ ಸಹಿತ ಒಟ್ಟಾರೆ 249 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.
PC: Twitter/Doordarshan Sports
261 ಕೆಜಿ ಭಾರತ ಎತ್ತಿದ ಮಲೇಷ್ಯಾದ ಮುಹಮ್ಮದ್ ಇಜಾರ್ ಚಿನ್ನ ಗೆದ್ದರೆ, ಶ್ರೀಲಂಕಾದ ಚತುರಂಗ ಲಕ್ಮಲ್(248 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಗುರುರಾಜ್ ಕಂಚಿನ ಪದಕ ಗೆದ್ದಿದ್ದರು. 2010ರಲ್ಲಿ ವೇಟ್‌ಲಿಫ್ಟಿಂಗ್ ಆರಂಭಿಸಿದ್ದ ಗುರುರಾಜ್, ಮಲೇಷ್ಯಾದ ಪೆನಾಗ್‌ನಲ್ಲಿ 2016ರಲ್ಲಿ ನಡೆದ ಕಾಮನ್ವೆಲ್ತ್ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಸೌತ್ ಏಷ್ಯನ್ ಗೇಮ್ಸ್‌ನಲ್ಲೂ ಸ್ವರ್ಣ ಪದಕ ಗೆದ್ದಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರದವರಾದ ಗುರುರಾಜ್ ಅವರ ತಂಡೆ ಟ್ರಕ್ ಡ್ರೈವರ್. ವೇಟ್‌ಲಿಫ್ಟಿಂಗ್‌ಗೂ ಮೊದಲು ಕುಸ್ತಿ ಪಟುವಾಗಿದ್ದ ಗುರುರಾಜ್, ಇದೀಗ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

Related Articles