ಕೇಪ್‌ಟೌನ್: ಕಾಂಗರೂಗಳು ಚೆಂಡನ್ನು ವಿರೂಪಗೊಳಿಸಿ ಕಳ್ಳಾಟವಾಡಿದರೂ ದಕ್ಷಿಣ ಆಫ್ರಿಕಾ ತಂಡ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 322 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಆಸ್ಟ್ರೇಲಿಯನ್ನರ ಮೋಸದಾಟದ ನಡುವೆಯೂ ಜಂಟಲ್‌ಮ್ಯಾನ್ ಕ್ರೀಡೆ ಕ್ರಿಕೆಟ್‌ಗೆ ಸಿಕ್ಕ ಜಯ.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ನಾಲ್ಕೇ ದಿನಗಳಲ್ಲಿ ಹೀನಾಯ ಸೋಲು ಅನುಭವಿಸಿತು. ಅಲ್ಲದೆ ಕಳ್ಳಾಟವಾಡಿದ ತಪ್ಪಿಗೆ ಕಾಂಗರೂಗಳಿಗೆ ಕ್ರಿಕೆಟ್ ಸರಿಯಾದ ಬುದ್ಧಿಯನ್ನೇ ಕಲಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್‌ಗಳ ಮುನ್ನಡೆ ಸಾಸಿದ್ದ ದಕ್ಷಿಣ ಆಫ್ರಿಕಾದ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 373 ರನ್‌ಗಳಿಗೆ ಆಲೌಟಾಗಿ ಕಾಂಗರೂಗಳ ಗೆಲುವಿಗೆ 430 ರನ್‌ಗಳ ಕಠಿಣ ಗುರಿ ನಿಗದಿ ಪಡಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಏಡನ್ ಮಾರ್ಕ್‌ರಮ್ 84, ಎಬಿ ಡಿ’ವಿಲಿಯರ್ಸ್ 63, ಕ್ವಿಂಟನ್ ಡಿ’ಕಾಕ್ 65, ವೆರ್ನಾನ್ ಫಿಲ್ಯಾಂಡರ್ ಅಜೇಯ 52 ಮತ್ತು ಕಗಿಸೊ ರಬಾಡ 20 ರನ್ ಗಳಿಸಿದರು.
430 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವೇಗಿ ಮೊರ್ನೆ ಮೊರ್ಕೆಲ್ ಅವರ ಮಾರಕ ದಾಳಿಗೆ ಧೂಳೀಪಟಗೊಂಡು 107 ರನ್‌ಗಳಿಗೆ ಆಲೌಟಾಯಿತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಕಟ್ಟ ಕಡೆಯ ಕ್ರಿಕೆಟ್ ಸರಣಿಯನ್ನಾಡುತ್ತಿರುವ ಮೊರ್ಕೆಲ್ 23 ರನ್ನಿತ್ತು 5 ವಿಕೆಟ್ ಪಡೆದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮ ಮಡಿಲಿಗೆ ಹಾಕಿಕೊಂಡರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: ಪ್ರಥಮ ಇನ್ನಿಂಗ್ಸ್ 97.5 ಓವರ್‌ಗಳಲ್ಲಿ 311 ರನ್
ಡೀನ್ ಎಲ್ಗರ್ ಅಜೇಯ 141, ಹಶೀಮ್ ಆಮ್ಲಾ 31, ಎಬಿ ಡಿ’ವಿಲಿಯರ್ಸ್ 64, ಕಗಿಸೊ ರಬಾಡ 22; ಪ್ಯಾಟ್ ಕಮಿನ್ಸ್ 4/78, ಜೋಶ್ ಹೇಝಲ್‌ವುಡ್ 2/59, ನೇಥನ್ ಲಯಾನ್ 2/43.
ಆಸ್ಟ್ರೇಲಿಯಾ: ಪ್ರಥಮ ಇನ್ನಿಂಗ್69.5 ಓವರ್‌ಗಳಲ್ಲಿ 255 ರನ್
ಕ್ಯಾಮರಾನ್ ಬ್ಯಾಂಕ್ರಾಫ್ಟ್ 77, ಡೇವಿಡ್ ವಾರ್ನರ್ 30, ಶಾನ್ ಮಾರ್ಷ್ 26, ಟಿಮ್ ಪೇಯ್ನ್ ಅಜೇಯ 34, ನೇಥನ್ ಲಯಾನ್ 47; ಮೊರ್ನೆ ಮೊರ್ಕೆಲ್ 4/87, ಕಗಿಸೊ ರಬಾಡ 4/91, ವೆರ್ನಾನ್ ಫಿಲ್ಯಾಂಡರ್ 2/26.
ದಕ್ಷಿಣ ಆಫ್ರಿಕಾ: ದ್ವಿತೀಯ ಇನ್ನಿಂಗ್ಸ್ 112.2 ಓವರ್‌ಗಳಲ್ಲಿ 373 ರನ್
ಏಡನ್ ಮಾರ್ಕ್‌ರಮ್ 84, ಎಬಿ ಡಿ’ವಿಲಿಯರ್ಸ್ 63, ಕ್ವಿಂಟನ್ ಡಿ’ಕಾಕ್ 65, ವೆರ್ನಾನ್ ಫಿಲ್ಯಾಂಡರ್ ಅಜೇಯ 52, ಕಗಿಸೊ ರಬಾಡ 20 ; ಪ್ಯಾಟ್ ಕಮಿನ್ಸ್ 3/67, ಜೋಶ್ ಹೇಝಲ್‌ವುಡ್ 3/69, ನೇಥನ್ ಲಯಾನ್ 3/102.
ಆಸ್ಟ್ರೇಲಿಯಾ: ದ್ವಿತೀಯ ಇನ್ನಿಂಗ್ಸ್ 39.4 ಓವರ್‌ಗಳಲ್ಲಿ 107 ರನ್
ಕ್ಯಾಮರಾನ್ ಬ್ಯಾಂಕ್ರಾಫ್ಟ್ 26, ಡೇವಿಡ್ ವಾರ್ನರ್ 32, ಮಿಚೆಲ್ ಮಾರ್ಷ್ 16 ; ಮೊರ್ನೆ ಮೊರ್ಕೆಲ್ 5/23, ಕೇಶವ್ ಮಹಾರಾಜ್ 2/32, ಕಗಿಸೊ ರಬಾಡ 1/31.