ಬೆಂಗಳೂರು: ದಕ್ಷಿಣ ಆಫ್ರಿಕಾದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡ ವ್ಯವಸ್ಥಿತವಾಗಿ ಬಾಲ್ ಟ್ಯಾಂಪರಿಂಗ್ ನಡೆಸಲು ಪ್ರಯತ್ನಿಸಿರುವುದು ಹೌದು ಎಂಬುದನ್ನು ಒಪ್ಪಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಈಗಾಗಲೇ ಆಸೀಸ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇದೀಗ ಐಪಿಎಲ್‌ನಲ್ಲಿ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರಿಗೆ ರಾಯಲ್ಸ್ ನಾಯಕ ಪಟ್ಟ ಕಟ್ಟಲಾಗಿದೆ.ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಟೀವನ್ ಸ್ಮಿತ್ ಮತ್ತು ಅಜಿಂಕ್ಯ ರಹಾನೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪರ ಆಡಿದ್ದರು.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ 3ನೇ ಟೆಸ್ಟ್ ಪಂದ್ಯದ 3ನೇ ದಿನ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದು ಕ್ಯಾಮರಾಗಳ ಕಣ್ಣಿನಲ್ಲಿ ಸೆರೆಯಾಗಿತ್ತು. ಆಸ್ಟ್ರೇಲಿಯಾ ತಂಡ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದು ನಿಜ ಎಂದು ನಾಯಕ ಸ್ಟೀವನ್ ಸ್ಮಿತ್ ದಿನದಾಟದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸ್ಟೀವನ್ ಸ್ಮಿತ್ ಮತ್ತು ಉಪನಾಯಕನ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವ ಡೇವಿಡ್ ವಾರ್ನರ್ ಅವರ ಮೇಲೆ ಆಜೀವ ನಿಷೇಧ ಹೇರುವ ಸಾಧ್ಯತೆಗಳೂ ಇವೆ.