Thursday, December 12, 2024

ಕರ್ನಾಟಕ ಕ್ರಿಕೆಟ್‌ ತಂಡ ಸಂಕಷ್ಟ ಎದುರಿಸುತ್ತಿದೆಯೇ?

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ Syed Mushtaq Ali Trophy ಕರ್ನಾಟಕ ತಂಡ ಉತ್ತರ ಪ್ರದೇಶದ ವಿರುದ್ಧ ಸೋತ ರೀತಿಯನ್ನು ನೋಡಿದರೆ ಕರ್ನಾಟಕ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ ಎಂದೆನಿಸುತ್ತದೆ. Karnataka Cricket team needs some changes

ಉತ್ತರ ಪ್ರದೇಶ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಹೆಂದೆಂದೂ ಕಾಣದ ರೀತಿಯಲ್ಲಿ ಹೀನಾಯ ಸೋಲನುಭವಿಸಿತು. ಕರ್ನಾಟಕ ಕಳಪೆ ಬೌಲಿಂಗ್‌ ಪ್ರದರ್ಶಿಸುವ ಮೂಲಕ ಉತ್ತರ ಪ್ರದೇಶ 4 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ 18.3 ಓವರ್‌ಗಳಲ್ಲಿ 156 ರನ್‌ಗೆ ಸರ್ವ ಪತನ ಕಂಡು 40 ರನ್‌ ಅಂತರದಲ್ಲಿ ಸೋತಿತು.

ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ನಲ್ಲಿ ಆಡಿದ ಮಾತ್ರಕ್ಕೆ ಕರ್ನಾಟಕ ತಂಡದಲ್ಲಿ ನಿರಂತರ ಸ್ಥಾನ ಸಿಗಬೇಕೆಂಬ ಕಾನೂನು ಇಲ್ಲ. ಐಪಿಎಲ್‌ ಹಣ ಮಾಡುವ ಟೂರ್ನಿಯೇ ಹೊರತು ಕ್ರಿಕೆಟ್‌ ಕಲಿಯಲು ಅಲ್ಲಿ ಅವಕಾಶಾವಿಲ್ಲ. ಅಲ್ಲಿ ಆಡಿದರೆಂದ ಮಾತ್ರಕ್ಕೆ ಅವರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಸಾಮರ್ಥ್ಯ ಇದೆ ಎಂಬುದು ಸುಳ್ಳು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕುಳಿತುಕೊಂಡರೆ ಅದು ಅವರಿಗೆ ಸಿಗುವ ವೈಯಕ್ತಿಕ ಸ್ಫೂರ್ತಿಯೇ ಹೊರತು ಇಡೀ ತಂಡಕ್ಕೆ ಅದರಿಂದ ಪ್ರಯೋಜನವಿಲ್ಲ. ಅನೇಕ ಹಿರಿಯ ಆಟಗಾರರನ್ನು ಕಡೆಗಣಿಸಿದ ಪರಿಣಾಮ ಇಂದು ರಾಜ್ಯದ ಪ್ರಮುಖ ಆಟಗಾರರು ಬೇರೆ ರಾಜ್ಯಗಳಿಗೆ ಆಡಬೇಕಾದ ಅನಿವಾರ್ಯವಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ:

ಒಬ್ಬ ಉತ್ತಮ ಬೌಲರ್‌ ಇದ್ದರೆ ಆತನನ್ನು ಕಡೆಗಣಿಸಬೇಕೆಂದರೆ ಆತನಿಗೆ ಬೌಲಿಂಗ್‌ ಕೊಡದಿದ್ದರೆ ಮುಗಿಯಿತು. 2 ಓವರ್‌ಗೆ 4 ರನ್‌ ನೀಡಿ 3 ವಿಕೆಟ್‌ ಪಡೆದವರಿಗಿಂತ 18 ಓವರ್‌ಗೆ 50 ರನ್‌ ನೀಡಿ 3 ವಿಕೆಟ್‌ ಪಡೆದವರೇ ಶ್ರೇಷ್ಠ ಬೌಲರ್‌ಗಳು ಎನಿಸಿದಾಗ ತಂಡದ ಶಕ್ತಿಯ ಮೇಲೆ ಪರಿಣಾಮ ಬೀರದಿರದು. ಕ್ಲಬ್‌ಗಳನ್ನು ಹೊಂದಿರುವವರು ಕೆಎಸ್‌ಸಿಎಯಲ್ಲಿ ಪದಾಧಿಕಾರಿಗಳಾಗಿದ್ದಲ್ಲಿ ಅವರು ತಮ್ಮ ಕ್ಲಬ್‌ನ ಆಟಗಾರರ ಮೇಲೆ ಪ್ರಭಾವ ಬೀರದೇ ಇರಲು ಸಾಧ್ಯವಿಲ್ಲ.  

ಒಬ್ಬ ಆಟಗಾರ ಲಾಂಗ್‌ ಫಾರ್ಮೆಟ್‌ಗೆ ಬೇಡವಾಗಿದ್ದಲ್ಲಿ ಆತನ ಗಮನಕ್ಕೆ ತರುವುದು ಸ್ವಾಗತಾರ್ಹ. ಆದರೆ ಆತ ಯಾವುದೇ ಮಾದರಿಯಲ್ಲೂ ಆಡಬಾರದು ಎಂಬ ಕ್ರೀಡಾ ಸ್ಪೂರ್ತಿ ಇಲ್ಲದ ತೀರ್ಮಾನ ಕೈಗೊಳ್ಳುವ ರಾಜ್ಯ ಕ್ರಿಕೆಟ್‌ನ  ಮುಂದಿನ ದಿನಗಳು ಇನ್ನೂ ಕಷ್ಟವೆನಿಸಬಹುದು. 31 ವರ್ಷ ಆಟಗಾರ ಕರುಣ್‌ ನಾಯರ್‌ಗೆ ವಯಸ್ಸಾಯಿತು ಎನ್ನುವವರು 35 ವರ್ಷದ ಕೆ.ಎಂ. ಗೌತಮ್‌ಗೆ ಏನಾಯಿತೆನ್ನಬೇಕು. ಕರುಣ್‌‌ ನಾಯರ್‌ ಕೆಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದರು. ಕೌಂಟಿಯಲ್ಲಿ ಶತಕ ಸಿಡಿಸಿದರು. ಮೊನ್ನೆ ಸಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ವಿದರ್ಭ ಪರ 95* ರನ್‌ ಗಳಿಸಿರು. ಆದರೆ ಇಂಥ ಆಟಗಾರರು ನಮಗೆ ಬೇಡ.

ಇದುವರೆಗೂ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಶ್ರೇಯಸ್‌ ಗೋಪಾಲ್‌ ಟಿ20ಯಲ್ಲಿ 100ನೇ ವಿಕೆಟ್‌ ಗಳಿಸಲು ಕೇರಳ ಸೇರಬೇಕಾಯಿತು. ಈ ಬಾರಿಯ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ಹಿರಿಯ ಮತ್ತು ಅನುಭವಿ ಎಂದೆನಿಸಿಕೊಂಡ ಆಟಗಾರರ ಹಿಂದಿನ ಹತ್ತು ಪಂದ್ಯಗಳ ಸ್ಕೋರ್‌ ಕಾರ್ಡ್‌ ನೋಡಿ…. ಮೊಬೈಲ್‌ ನಂಬರ್‌ ರೀತಿ ಇದೆ. ಯಾವುದೇ ಕ್ರೀಡೆಯಾಗಿರಲಿ ಅಲ್ಲಿ ಹಣಕ್ಕಾಗಿ ಆಡುತ್ತಿದ್ದರೆ ಆ ಕ್ರೀಡೆಯ ಆಯ್ಕೆಯಲ್ಲಿ ಗೊಂದಲಗಳು ತಾನಾಗಿಯೇ ಪ್ರವೇಶ ಮಾಡುತ್ತದೆ. ಇದು ಕೇವಲ ನಮ್ಮ ರಾಜ್ಯದ ಕ್ರಿಕೆಟ್‌ ಸಂಸ್ಥೆಗೆ ಮಾತ್ರ ಸಂಬಂಧಿಸಿಲ್ಲ ಇಡೀ ದೇಶದ ತುಂಬೆಲ್ಲ ಆವರಿಸಿದೆ.

Related Articles