Monday, April 15, 2024

ಕತಾರ್‌ನಲ್ಲಿ ಕ್ರಿಕೆಟ್ ಬೆಳಗಿದ ಕನ್ನಡಿಗರು

ಬೆಂಗಳೂರು: ಬದುಕನರಸಿ ಕತಾರ್‌ಗೆ ತೆರಳಿದ್ದ ಕುಂದಗನ್ನಡಿಗರ ತಂಡವೊಂದು ಅಲ್ಲಿ ಕ್ರಿಕೆಟ್ ಕ್ಲಬ್‌ವೊಂದನ್ನು ಕಟ್ಟಿ, ಸ್ಥಳೀಯರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಹಬ್ಬ ಆಚರಿಸಿ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.

ಕುಂದಾಪುರ ತಾಲೂಕು ಕ್ರಿಕೆಟರ್ಸ್ ತಂಡ ಆಯೋಜಿಸಿದ ಕುಂದಾಪುರ ಟ್ರೋಫಿ 2018ನ್ನು ಅಲ್ಲಿಯ ಗಲ್‌ಹಿನ್ನಾ ತಂಡ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಅಲೈಯನ್ಸ್ ಕತಾರ್ ತಂಡವನ್ನು ಸುಲಭವಾಗಿ ಮಣಿಸಿದ ಗೆಲ್‌ಹಿನ್ನಾ ತಂಡ ಎರಡನೇ ವರ್ಷದ ಪ್ರಶಸ್ತಿ ಗೆದ್ದುಕೊಂಡಿತು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕ್ರಿಕೆಟ್ ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳು ಕಟ್ಟಿದ ಸಂಸ್ಥೆಯೇ ಕುಂದಾಪುರ ಕ್ರಿಕೆಟರ್ಸ್. ಕೇವಲ ಕ್ರಿಕೆಟ್ ಮಾತ್ರವಲ್ಲದ ಸಾಮಾಜಿಕ ಸೇವೆಯಲ್ಲೂ ಈ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ನಾಲ್ಕು ದಿನಗಳ ಕಾಲ ಫ್ಲಡ್ ಲೈಟ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಆಹ್ವಾನಿತ ಹತ್ತು ಉತ್ತಮ ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆದಿತ್ತು. ಸಮಾರೋಪ ಸಮಾರಂಭದಲ್ಲಿ  ಕರ್ನಾಟಕದ ಮಾಜಿ ಸಚಿವ, ಜನಾನುರಾಗಿ ಕೆ. ಜಯ ಪ್ರಕಾಶ್ ಹೆಗ್ಡೆ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಐಎಸ್‌ಸಿ ಸಂಸ್ಥೆಯ ಚೇರ್ಮನ್ ಮತ್ತು ಮುಖ್ಯಸ್ಥ ಅಜೀಮ್ ಅಬ್ಬಾಸ್ ಪಾಲ್ಗೊಂಡಿದ್ದರು. ಭಾರತ ಹಾಗೂ ಕತಾರ್ ರಾಷ್ಟ್ರಧ್ವಜ ಹಿಡಿದ ಪುಟ್ಟ ಮಕ್ಕಳು ಮುಖ್ಯ ಅತಿಥಿಗಳನ್ನು ಬರಮಾಡಿಕೊಂಡರು.
ಕತಾರ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಕೆಟಿಸಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಜಿಮ್ ಅಬ್ಬಾಸ್ ಮುಕ್ತ ಕಂಠದಿಂದ ಹೊಗಳಿದರು. ಕತಾರ್‌ಗೆ ತಮ್ಮನ್ನು ಕರೆಸಿ ಸನ್ಮಾನ ಮಾಡಿರುವುದಕ್ಕೆ ಜಯ ಪ್ರಕಾಶ್ ಹೆಗ್ಡೆ ಅವರು ಕೆಟಿಸಿ ಕಾರ್ಯವನ್ನು ಶ್ಲಾಘಿಸಿದರು. ‘‘ಎಲ್ಲರೂ ಒಗ್ಗಟ್ಟಿನಲ್ಲಿ ಆಟದಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚುಗೆಯ ಸಂಗತಿ. ಕ್ರಿಕೆಟ್ ನಾವು ಸೌಹಾರ್ದತೆಯಿಂದ ಬಾಳುವುದನ್ನು ಕಲಿಸುತ್ತದೆ. ಕ್ರೀಡೆ ಒಗ್ಗಟ್ಟಿನ ಸಂಕೇತ,’’ ಎಂದು ಜಯಪ್ರಕಾಶ್ ಹೆಗ್ಡೆ ಈ ಸಂದರ್ಭದಲ್ಲಿ ಹೇಳಿದರು.
ಕೆಟಿಸಿ ಸಂಸ್ಥೆಯ ಉಪಾಧ್ಯಕ್ಷ ಮುಬಾರಕ್ ಕೋಡಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘಟನಾ ಸಮಿತಿ ಸದಸ್ಯ ದೀಪಕ್ ಶೆಟ್ಟಿ ಟೂರ್ನಿ ಯಶಸ್ವಿಯಾಗಿರುವುದಕ್ಕೆ ಶ್ರಮಿಸಿದ ಪ್ರತಿಯೊಬ್ಬರನ್ನೂ ಸಭೆಯಲ್ಲಿ ಸ್ಮರಿಸಿದರು. ಕೆಟಿಸಿಯ ಪ್ರಧಾನ ಕಾರ್ಯದರ್ಶಿ ಇಂತಿಕಾಬ್ ಅಲಮ್ ಪ್ರಾಸ್ತಾವಿಕ ಮಾತನಾಡಿದರು. ಕ್ರೀಡಾ ಕಾರ್ಯದರ್ಶಿ ಶೆಹಜಾದ್ ಹಾಗೂ ತುಫೈಲ್ ಮಾಥೀನ್ ಕಾರ್ಯಕ್ರಮ ಸಂಯೋಜಿಸಿದರು. ಕತಾರ್ ಫ್ರೀಲಾನ್ಸ್ ಗ್ರೂಪ್‌ನ ಇಮ್ರಾನ್ ನಾವುಂದ, ಕೆಟಿಸಿಯ ಮಾಜಿ ಅಧ್ಯಕ್ಷ ಅಕ್ಬರ್ ಗಂಗೊಳ್ಳಿ, ಕರ್ನಾಟಕ ಮೂಲದ ಎಲ್ಲ ಸಂಘಟನೆಗಳ ಅಧ್ಯಕ್ಷರಾದ ಎಚ್.ಕೆ. ಮಧು, ಕೆಎಸ್‌ಕ್ಯೂ, ತುಳುಕೂಟದ ಅಧ್ಯಕ್ಷ ಅಸ್ಮತ್ ಅಲಿ, ಕೆಎಂಸಿಎನ ಅಬ್ದುಲ್ಲಾ, ಎಂಸಿಸಿ ಅಧ್ಯಕ್ಷ ಪ್ರಕಾಶ್ ನೊರೋನ್ಹಾ, ಎಸ್ ಕೆಎಂಡಬ್ಲ್ಯುಎ ಅಬ್ದುಲ್ ಮಾಜಿದ್, ತುಳುಕೂಟದ ರವಿ ಶೆಟ್ಟಿ ಹಾಜರಿದ್ದರು.
ಫೈನಲ್ ಪಂದ್ಯದಲ್ಲಿ ಅಲೆಯನ್ಸ್ ತಂಡ 6 ಓವರ್‌ ಗಳಲ್ಲಿ 56ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಸಿಸಿ 5.1 ಓವರ್‌ ಗಳಲ್ಲಿ ಜಯದ ಗುರಿ ತಲುಪಿತು.
ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಜಿಸಿಸಿಯ ಹುಸ್ನಿ, ಯಾರ್ಕರ್ ತಂಡದ ಮುದಾಸಿರ್ ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಆಗಿ ಯಾರ್ಕರ್ ನ ಸಂಜೀವ್ ಹಾಗೂ ಸರಣಿ ಶ್ರೇಷ್ಠರಾಗಿ ಜಿಸಿಸಿಯ ಸಿಫಾನ್ ಆಯ್ಕೆಯಾದರು.

Related Articles