Wednesday, July 24, 2024

ಐಪಿಎಲ್ ಅಖಾಡಕ್ಕೆ ಮರಳಿದ ನಝಾಫ್ ಗಢದ ನವಾಬ… ಮತ್ತೆ ನೋಡಲಿದ್ದೀರಿ ವೀರೂ ಅಬ್ಬರ

ಬೆಂಗಳೂರು: ನಝಾಫ್ ಗಢದ ನವಾಬ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸೆಹ್ವಾಗ್ ಕ್ರೀಸ್‌ನಲ್ಲಿದ್ದರೆ ಅಲ್ಲಿ ಬೌಲರ್‌ಗಳ ಮಾರಣಹೋಮ ಗ್ಯಾರಂಟಿ. ಆದರೆ 2015ರಲ್ಲಿ ಕ್ರಿಕೆಟ್ ವಿದಾಯ ಹೇಳಿದ ನಂತರ ಸೆಹ್ವಾಗ್ ಖದರ್ ನೋಡುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದರು. ಅಂತಹ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಸೆಹ್ವಾಗ್ ಮತ್ತೆ ಐಪಿಎಲ್‌ನಲ್ಲಿ ಆಡಲಿದ್ದಾರೆ.

PC: Twitter/Virender Sehwag

ಹೌದು. 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೆಹ್ವಾಗ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಕ್ವೀನ್ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ತನ್ನ ಮೊದಲ ಪಂದ್ಯದಲ್ಲಿ ಏಪ್ರಿಲ್ 8ರಂದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದೊಂದಿಗೆ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೆಹ್ವಾಗ್ ಕಿಂಗ್ಸ್ ಇಲವೆನ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿರುವ ಕಾರಣ, ಸೆಹ್ವಾಗ್ ಮತ್ತೆ ಕ್ರಿಕೆಟ್ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೀರೂ ಆಡಲಿರುವುದು ಈ ಪಂದ್ಯದಲ್ಲಿ ಮಾತ್ರ. ಇದನ್ನು ಸ್ವತಃ ಸೆಹ್ವಾಗ್ ಅವರೇ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಅಧಿಕೃತ ವೆಬ್‌ಸೈಟ್‌ಗೆ ಖಚಿತ ಪಡಿಸಿದ್ದಾರೆ.

PC: Twitter/Kings XI Punjab

ಆರಂಭದಲ್ಲಿ ಯುವ ಆಟಗಾರರ ಬೌಲಿಂಗ್ ಅಭ್ಯಾಸಕ್ಕೆ ನೆರವಾಗಲು ನೆಟ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದೆ. ಆದರೆ ನಾನು ಚೆಂಡನ್ನು ಸರಿಯಾಗಿ ಗ್ರಹಿಸಿ ನನ್ನ ಸ್ಟ್ರೋಕ್‌ಗಳನ್ನು ಉತ್ತಮವಾಗಿ ಬಾರಿಸಿದೆ. ಫಿಂಚ್ ಅನುಪಸ್ಥಿತಿಯಲ್ಲಿ ಯಾರು ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸುವುದು ಎಂಬ ಪ್ರಶ್ನೆ ಎದುರಾದಾಗ ಕೋಚ್ ಬ್ರಾಡ್ ಹಾಡ್ಜ್ ತಮಾಷೆಗಾಗಿ ನನ್ನ ಹೆಸರು ಹೇಳಿದರು. ಆಗ ಇದರ ಬಗ್ಗೆ ನಾನು ಗಂಭೀರವಾಗಿ ಯೋಚಿಸಲು ಆರಂಭಿಸಿದೆ.
– ವೀರೇಂದ್ರ ಸೆಹ್ವಾಗ್, ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮಾರ್ಗದರ್ಶಕ.

ಆಸಕ್ತಿದಾಯಕ ಸಂಗತಿಯೆಂದರೆ ವೀರೇಂದ್ರ ಸೆಹ್ವಾಗ್ ತಮ್ಮ ತವರು ನೆಲ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮತ್ತೆ ಕ್ರಿಕೆಟ್ ಅಂಗಣಕ್ಕೆ ಧುಮುಕಲಿದ್ದಾರೆ. ಮತ್ತೊಂದು ವಿಶೇಷ ಎಂದರೆ ಸೆಹ್ವಾಗ್ ಅವರಿಗೆ ಎದುರಾಗಿ ನಿಂತಿರುವುದು ಟೀಮ್ ಇಂಡಿಯಾದಲ್ಲಿ ಅವರ ಮಾಜಿ ಆರಂಭಿಕ ಜೊತೆಗಾರ ಹಾಗೂ ಆತ್ಮೀಯ ಗೆಳೆಯ ಗೌತಮ್ ಗಂಭೀರ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ತಂಡ.

ಆಟಗಾರನಾಗಿದ್ದಾಗ ಡೆಲ್ಲಿ ನನ್ನ ಕರ್ಮಭೂಮಿಯಾಗಿತ್ತು. ಈಗ ನನ್ನ ನಿಷ್ಠೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ. ಇನ್ನು ಗೌತಿ ವಿಚಾರಕ್ಕೆ ಬಂದರೆ, ಅವರ ಹೆಸರಲ್ಲೇ ಗಂಭೀರತೆ ಇದೆ. ಆದರೆ ನಾನು ಮತ್ತೆ ಆಡುವುದನ್ನು ನೋಡಿದ ನಂತರ ಅವರ ಮುಖದಲ್ಲಿ ನಗು ಮೂಡಬಹುದು.
– ವೀರೇಂದ್ರ ಸೆಹ್ವಾಗ್, ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮಾರ್ಗದರ್ಶಕ.

ಸೆಹ್ವಾಗ್ ಅವರನ್ನು ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಸುವ ತಂತ್ರದ ಬಗ್ಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪ್ರಧಾನ ಕೋಚ್ ಬ್ರಾಡ್ ಹಾಡ್ಜ್ ಪ್ರತಿಕ್ರಿಯಿಸಿದ್ದಾರೆ.
PC: Twitter/Kings XI Punjab

ಇನ್ನಿಂಗ್ಸ್ ಆರಂಭಿಸಲು ನಮ್ಮ ಮುಂದೆ ಕೆಲ ಹೆಸರುಗಳು ಬಂದವು. ಆದರೆ ತಂಡದ ಸಂಯೋಜನೆ ಸೂಕ್ತವಾಗಿ ಮೂಡಿ ಬರಲಿಲ್ಲ. ಆದರೆ ನೆಟ್ಸ್‌ನಲ್ಲಿ ಸೆಹ್ವಾಗ್ ಅವರ ಬ್ಯಾಟಿಂಗ್ ನೋಡಿ, ಅವರನ್ನು ಮೊದಲ ಪಂದ್ಯದಲ್ಲಿ ಏಕೆ ಕಣಕ್ಕಿಳಿಸಬಾರದು ಎಂಬ ಆಲೋಚನೆ ಮೂಡಿತು. ತಂಡದ ಶಿಬಿರದಲ್ಲಿ ಈ ಕುರಿತು ಸೆಹ್ವಾಗ್ ಅವರೊಂದಿಗೆ ಮಾತನಾಡಿದೆ. ಆಗ ಅವರು ಮತ್ತೆ ಮೈದಾನಕ್ಕಿಳಿಯುವ ಬಗ್ಗೆ ಅತ್ಯಂತ ಉತ್ಸುಕರಾದರು.
– ಬ್ರಾಡ್ ಹಾಡ್ಜ್, ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪ್ರಧಾನ ಕೋಚ್.

Related Articles