Thursday, April 18, 2024

ಐಎಸ್‌ಎಲ್: ಛೆಟ್ರಿ ಹ್ಯಾಟ್ರಿಕ್, ಫೈನಲ್‌ಗೆ ಬೆಂಗಳೂರು ಎಫ್‌ಸಿ

ಬೆಂಗಳೂರು: ನಾಯಕ ಸುನಿಲ್ ಛೆಟ್ರಿ (15, 65 ಮತ್ತು 89ನೇ ನಿಮಿಷ) ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಫ್‌ಸಿ ಪುಣೆ ಸಿಟಿ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪ್ರವೇಶಿಸಿತು. ಪುಣೆ ತಂಡದ ಪರ ಜೊನಾಥನ್ ಲುಕ್ಕಾ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತೇ ಹೊರತು ಬೆಂಗಳೂರು ತಂಡ ಫೈನಲ್ ಪ್ರವೇಶಿಸುವುದನ್ನು ತಡೆಯಲಾಗಲಿಲ್ಲ. ಛೆಟ್ರಿ ಪ್ರಸಕ್ತ ಲೀಗ್‌ನಲ್ಲಿ 13ನೇ ಗೋಲು ಗಳಿಸಿ ನಾಯಕನ ಜವಾಬ್ದಾರಿಯನ್ನು ಪ್ರದರ್ಶಿಸಿದರು.

PC: ISL

ದ್ವಿತಿಯಾರ್ಧದ ಆರಂಭದಲ್ಲೇ ಪುಣೆ ತಂಡ ಗೋಲು ಗಳಿಸುವ ಅವಕಾಶವನ್ನು ಎಂದಿನಂತೆ ಕೈ ಚೆಲ್ಲಿತು. ಆದರೆ 65ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಪೆನಾಲ್ಟಿ ವಲಯದಲ್ಲಿ ಸಾರ್ಥಕ್ ಗೌಳಿ ನಾಯಕ ಛೆಟ್ರಿಯನ್ನು ತಳ್ಳಿದರು. ನಿರೀಕ್ಷೆಯಂತೆ ರೆಫರಿ ಬೆಂಗಳೂರು ತಂಡಕ್ಕೆ ಪೆನಾಲ್ಟಿ ಕಿಕ್ ಅವಕಾಶ ಕಲ್ಪಿಸಿದರು. ಜಾಣ್ಮೆಯ ಹೊಡೆತದಲ್ಲಿ ಛೆಟ್ರಿ ಎದುರಾಳಿಯ ಗೋಲ್‌ಕೀಪರ್ ವಿಶಾಲ್‌ ಕೈತ್ ಅವರನ್ನು ವಂಚಿಸಿ ತಂಡಕ್ಕೆ ಎರಡನೇ ಗೋಲು ನೀಡಿದರು. ಈ ಹಂತದಲ್ಲಿ ಬೆಂಗಳೂರು ಜಯಕ್ಕೆ ಅಗತ್ಯವಿರುವ ವೇದಿಕೆ ಸೃಷ್ಟಿಮಾಡಿಕೊಂಡಿತು. ಫುಟ್ಬಾಲ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜೊನಾಥನ್ ಲುಕ್ಕಾ 82ನೇ ನಿಮಿಷದಲ್ಲಿ ಫ್ರೀಕಿಕ್ ಮೂಲಕ ಗಳಿಸಿದ ಗೋಲಿನ ಮೂಲಕ ಪುಣೆ ತಂಡ ಚೇತರಿಸಿಕೊಂಡಿತು. ಪಂದ್ಯ 2-1ರಲ್ಲಿ ಸಾಗಿತು. 89ನೇ ನಿಮಿಷದಲ್ಲಿ ಛೆಟ್ರಿ ಹ್ಯಾಟ್ರಿಕ್ ಸಾಧನೆ ಮೂಲಕ ಬೆಂಗಳೂರು ಎಫ್‌ಸಿ 3-1 ಅಂತರದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಮೊದಲ ಗೋಲಿನ ಮುನ್ನುಡಿ
ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹ, ಅಂಗಣದ ಅಂಚಿನಲ್ಲಿ ಅಲ್ಬರ್ಟ್ ರೊಕೊ ನೀಡುತ್ತಿದ್ದ ಸಲಹೆ ಇವುಗಳ ನಡುವೆ ಗೆಲ್ಲಲೇಬೇಕೆಂಬ ಛಲದಿಂದ ಹೆಜ್ಜೆ ಹಾಕಿದ ಬೆಂಗಳೂರು ಎಫ್‌ಸಿ ತಂಡ ಆರಂಭದಲ್ಲಿ ಎರಡು ಅವಕಾಶವನ್ನು ಕೈಚೆಲ್ಲಿದರೂ 15ನೇ ನಿಮಿಷದಲ್ಲಿ ಗೋಲು ದಾಖಲಾಯಿತು. ಉದಾಂತ್ ಸಿಂಗ್ 3ನೇ ನಿಮಿಷದಲ್ಲಿ ಉತ್ತಮ ಪಾಸ್ ನೀಡಿದ್ದರು. ಆದರೆ ಮಿಕು ನಿಯಂತ್ರಣ ತಪ್ಪಿದ ಕಾರಣ ಗೋಲು ಗಳಿಸಲಾಗಲಿಲ್ಲ. 15ನೇ ನಿಮಿಷದಲ್ಲಿ ಉದಾಂತ್ ಸಿಂಗ್ ಬಲ ಭಾಗದಿಂದ ನೀಡಿದ ಪಾಸ್ ಪುಣೆ ಆಟಗಾರರ ನಿಯಂತ್ರಣಕ್ಕೆ ಸಿಗುವಂತಿತ್ತು. ಪೆನಾಲ್ಟಿ ವಲಯದಲ್ಲಿ ಮಿಕು ಹಾಗೂ ಛೆಟ್ರಿ ಚೆಂಡಿಗಾಗಿ ಕಾಯುತ್ತಿದ್ದರು. ಉದಾಂತ್ ನೀಡಿದ ಪಾಸ್‌ಗೆ ಛೆಟ್ರಿ ತಲೆಯೊಡ್ಡಿದರು. ವಿಶಾಲ್ ಕೈತ್ ಚೆಂಡನ್ನು ಹಿಡಿಯುವ ತವಕದಲ್ಲಿದ್ದರು, ಈ ನಡುವೆ ಚೆಂಡು ಗುರ್ಜಿತ್ ಹಾಗೂ ವಿಶಾಲ್ ನಡುವೆ ಬಿದ್ದು, ಪುಟಿದು ನೆಟ್ ಸೇರಿಕೊಂಡಿತು.
ಕಂಠೀರವದಲ್ಲಿ ನೀಲಿ ಹುಡುಗರ ಅಭಿಮಾನಿಗಳ ಸಂಭ್ರಮಕ್ಕೆ ಎಣೆ ಇರಲಿಲ್ಲ. ಇದರೊಂದಿಗೆ ಲೀಗ್‌ನಲ್ಲಿ ಛೆಟ್ರಿ 11ನೇ ಗೋಲು ಗಳಿಸಿ ತಂಡದ ಮುನ್ನಡೆಗೆ ನೆರವಾದರು.
38ನೇ ನಿಮಿಷದಲ್ಲೂ ಬೆಂಗಳೂರು ತಂಡಕ್ಕೆ ಗೋಲು ಗಳಿಸುವ ಅವಕಾಶವಿದ್ದಿತ್ತು, ಉದಾಂತ್ ಸಿಂಗ್ ಬೆಂಗಳೂರಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಮಖ ಪಾತ್ರ ವಹಿಸಿದರು. ಈ ಬಾರಿ ಉದಾಂತ್ ನೀಡಿದ ಪಾಸ್ ಮೂಲಕ ಛೆಟ್ರಿ ಗೋಲು ಗಳಿಸುವ ಅವಕಾಶ ಪಡೆದಿದ್ದರು. ಛೆಟ್ರಿ ತುಳಿದ ಚೆಂಡು ಪುಣೆ ಆದಿಲ್ ಖಾನ್ ಅವರಿಗೆ ತಗಲಿ ಹಿಂದೆ ಸಾಗಿತು. ಬೆಂಗಳೂರು ತಂಡ ಚೆಂಡು ಕೈ ತಗಲಿದೆ ಎಂದು ಮನವಿ ಸಲ್ಲಿಸಿದರೂ ರೆಫರಿ ನಿರಾಕರಿಸಿದರು.
42ನೇ ನಿಮಿಷದಲ್ಲೂ ಛೆಟ್ರಿ ಉತ್ತಮ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಪುಣೆ ಪ್ರಥಮಾರ್ಧದ ಆರಂಭದಲ್ಲಿ ಹೆಚ್ಚು ಕಾಲ ಚೆಂಡನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿತ್ತು. ಮೊದಲ ಲೆಗ್‌ನಲ್ಲಿ ಇತ್ತಂಡಗಳು ತೋರಿದ ನೀರ ಪ್ರದರ್ಶನ ಇಲ್ಲಿ ಕಂಡು ಬಂದಿಲ್ಲ. ವಿಶಾಲ್ ಕೈತ್ ಪುಣೆಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡಿದರು. ಇಲ್ಲದೇ ಇರುತ್ತಿದ್ದರೆ ಬೆಂಗಳೂರು ಪ್ರಥಮಾರ್ಧದಲ್ಲಿ ಇನ್ನೂ ಎರಡು ಗೋಲುಗಳನ್ನು ಗಳಿಸಿ ಬೃಹತ್ ಮುನ್ನಡೆ ಕಂಡಿರುತ್ತಿತ್ತು.

Related Articles