ಐಎಸ್‌ಎಲ್ : ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ನಡುವಣ ಪಂದ್ಯ 2-2ರಲ್ಲಿ ಡ್ರಾ
ಕೋಲ್ಕೊತಾ, ಫೆಬ್ರವರಿ 8: ಎಟಿಕೆ ಪರ ರೆಯಾನ್ ಟೇಲರ್ (38) ಹಾಗೂ ಟಾಮ್ ಥೋರ್ಪ್ (75) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಗುಡ್ಜಾನ್ ಬಾಲ್ಡ್‌ವಿನ್ಸನ್ (33) ಹಾಗೂ ಡಿಮಿಟಾರ್ ಬೆರ್ಬಟೋವ್ (55ನೇ ನಿಮಿಷ) ಗೋಲು ಗಳಿಸುವುದರೊಂದಿಗೆ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವಿನ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯ 2-2 ಗೋಲಿನಿಂದ ಸಮಬಲಗೊಂಡಿತು.

ಪ್ರಥಮಾರ್ಧಲ್ಲಿ ಕೇರಳ ಹಾಗೂ ಎಟಿಕೆ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು. ಕೇರಳ ಗೋಲು ಗಳಿಸಿ 5 ನಿಮಿಷ ಕಳೆಯುತ್ತಿದ್ದಂತೆ ಎಟಿಕೆ ಗೋಲು ಗಳಿಸಿರುವುದು ವಿಶೇಷ. ಗೋಲ್ ಬಾಕ್ಸ್‌ನ ಮುಂಭಾಗದಲ್ಲೇ ಗುಡ್ಜಾನ್ ಬಾಲ್ಡ್‌ವಿನ್ಸನ್ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಕೇರಳ ಆರಂಬಿಕ ಮುನ್ನಡೆ ಕಂಡಿತು. ರೇಯಾನ್ ಟೇಲರ್ ಗಳಿಸಿದ ಗೋಲಿನಿಂದ ಆತಿಥೇಯ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಡ್ರಾದಲ್ಲಿ ಕೊನೆಗೊಂಡರೆ ಇತ್ತಂಡಗಳಿಗೂ ನಷ್ಟ.
33ನೇ ನಿಮಿಷದಲ್ಲಿ ಕೇರಳ ಮುನ್ನಡೆ ಸಾಧಿಸಿತು. ಗುಡ್ಜಾನ್ ಬಾಲ್ಡ್‌ವಿನ್ಸನ್ ಹೆಡರ್ ಮೂಲಕ ತಂಡಕ್ಕೆ ಯಶಸ್ಸಿನ ಹೆಜ್ಜೆ ತೋರಿಸಿದರು. ಎಡಭಾಗದಿಂದ ಪ್ರಶಾಂತ್ ಪಾಸ್ ನೀಡಿದರು. ಎತ್ತರದಿಂದ ಬಂದ ಚೆಂಡಿಗೆ ಗುಡ್ಜಾನ್ ಹೆಡರ್ ಮಾಡಿದಾಗ ಚೆಂಡು ನೇರವಾಗಿ ಗೋಲ್ ಬಾಕ್ಸ್‌ಗೆ ಕೇರಳ ತಂಡಕ್ಕೆ ಪಂದ್ಯ ಗೆದ್ದಷ್ಟೇ ಸಂಭ್ರಮ.
ಕೇರಳದ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಐದು ನಿಮಿಷ ಕಳೆಯುತ್ತಿದ್ದಂತೆ ಎಟಿಕೆ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ಬೆರ್ಬಾಟೋವ್‌ಗೆ ಚೆಂಡನ್ನು ಪಾಸ್ ಮಾಡಲು ಮಿಲಾನ್ ಸಿಂಗ್ ಯತ್ನಿಸುತ್ತಿದ್ದರು. ಆದರೆ ಈ ನಡುವೆ ರೆಯಾನ್ ಟೇಲರ್ ಪ್ರವೇಶಿಸಿ ಚೆಂಡನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ಕೆಳ ಹಂತದಲ್ಲಿ ಬಂದ ಚೆಂಡನ್ನು ಅದೇ ರೀತಿಯಲ್ಲಿ ತುಳಿದು ಗೋಲ್ ಬಾಕ್ಸ್ ತಲುಪಿಸುವಲ್ಲಿ ಯಶಸ್ವಿಯಾದರು. ಲಾಲ್‌ರುತ್ತಾರಾ ಚೆಂಡನ್ನು ನಿಯಂತ್ರಿಸಲು ಯತ್ನಿಸಿದರು.ಆದರೆ ಅಷ್ಟರಲ್ಲೇ ಚೆಂಡು ಗೋಲ್ ಬಾಕ್ಸ್ ತಲುಪಿತ್ತು.
ಎಟಿಕೆ ತಂಡ ಈ ಬಾರಿಯ ಐಎಸ್‌ಎಲ್ ಇದುವರೆಗೂ ಗಳಿಸಿದ್ದು ಕೇವಲ 8 ಗೋಲು. ತಂಡವೊಂದು ಗಳಿಸಿರುವ ಅತಿ ಕಡಿಮೆ ಗೋಲು ಇದಾಗಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿರುವ ಎಟಿಕೆ ನಾಲ್ಕರ ಹಂತ ತಲುಪಬೇಕಾದರೆ ಅತಿ ಹೆಚ್ಚು ಗೋಲುಗಳೊಂದಿಗೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಎಟಿಕೆ ತಂಡ ಇದುವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲವಾಗಿದೆ. ನಾರ್ತ್ ಈಸ್ಟ್ ಯುನೈಟೆಡ್ ಕೂಡ ಹೆಚ್ಚು ಪಂದ್ಯಗಳನ್ನಾಡಿ ಗೋಲು ಗಳಿಸುವಲ್ಲಿ ವಿಫಲವಾಗಿದೆ. ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಎಟಿಕೆ ಮನೆಯಂಗಣದಲ್ಲಿ ಕೇವಲ ಒಂದು ಪಂದ್ಯ ಗೆದ್ದಿದೆ. ಈ ರೀತಿಯ ಕಳಪೆ ಪ್ರದರ್ಶನವನ್ನು ಎಟಿಕೆ ತಂಡ ಇದುವರೆಗೂ ನೀಡಿಲ್ಲ. ಕೇರಳ ತಂಡ ಮನೆಯಂಗಣದಿಂದ ಹೊರಗಡೆ ಮೂರು ಪಂದ್ಯಗಳನ್ನು ಗೆದ್ದಿದೆ. ಡೇವಿಡ್ ಜೇಮ್ಸ್ ಕೋಚ್ ಆಗಿ ಬಂದ ನಂತರ ಕೇರಳ ತಂಡ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದೆ. ಕೇರಳ ಬ್ಲಾಸ್ಟಸ್ 6 ಪಂದ್ಯಗಳಲ್ಲಿ 4 ಜಯ ಕಂಡಿದೆ. ಇದಕ್ಕೂ ಮುನ್ನ 8 ಪಂದ್ಯಗಳನ್ನಾಡಿ ಕೇವಲ 1 ಜಯ ಕಂಡಿತ್ತು.
ಹಾಲಿ ಚಾಂಪಿಯನ್ ಕೇರಳ ತಂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಜತೆಯಲ್ಲಿ ಕೇವಲ ಐದು ವಿದೇಶಿ ಆಟಗಾರರನ್ನು ಹೊಂದಿದೆ. ಅಂತಿಮ ನಾಲ್ಕರ ಹಂತದಲ್ಲಿ ಅವಕಾಶ ಪಡೆಯುವ ಸಲುವಾಗಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜಾಯಿತು.
ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಎಟಿಕೆ ತಂಡ ವಿದೇಶಿ ಮೂಲದ ಪ್ರಮುಖ ಆಟಗಾರರಾದ ರಾಬೆ ಕೇನ್, ಪೋರ್ಚುಗೀಸ್ ಮಿಡ್‌ಫೀಲ್ಡರ್ ಜೆಕ್ವಿನ್ಹಾ ಮತ್ತು ವೇಲ್ಸನ್ ಮಿಡ್‌ಫೀಲ್ಡರ್ ಡೇವಿಡ್ ಕಾಟೆರಿಲ್ ಈಗಾಗಲೇ ತಂಡದಿಂದ ಹೊರಗುಳಿದಿದ್ದು, ಪ್ರವಾಸಿ ತಂಡ ಇದರ ಸದುಪಯೋಗ ಪಡೆಯಲು ಕೇರಳಕ್ಕೆ ಇದು ಸದಾವಕಾಶ. ಬೆಂಗಳೂರು ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಎಟಿಕೆ ನಾಲ್ಕರ ಹಂತ ತಲಪುವುದು ಕಷ್ಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಕೇರಳ ಬ್ಲಾಸ್ಟರ್ಸ್ ಸತತ ಎರಡು ಜಯದ ಆತ್ಮವಿಶ್ವಾಸದಲ್ಲಿ ಕೋಲ್ಕೊತಾಕ್ಕೆ ಆಗಮಿಸಿದೆ. 14 ಪಂದ್ಯಗಳನ್ನಾಡಿರುವ ಕೇರಳ ತಂಡ 20 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ತಂಡಕ್ಕೆ ಈಗ ಕೇವಲ ನಾಲ್ಕು ಪಂದ್ಯಗಳನ್ನಾಡುವ ಅವಕಾಶ ಇದೆ. ಜೇಮ್ಸ್ ಅವರು ಕೋಚ್ ಆದ ನಂತರ ಕೇರಳ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ನಾಯಕ ಸಂದೇಶ್ ಜಿಂಗಾನ್ ಅವರ ಅನುಪಸ್ಥಿತಿ ತಂಡವನ್ನು ಕಾಡುವುದು ಸ್ಪಷ್ಟ. ಅವರ ಅನುಪಸ್ಥಿತಿಯಲ್ಲಿ ವೆಸ್ ಬ್ರೌನ್ ತಂಡವನ್ನು ಮುನ್ನಡೆಸಲಿದ್ದಾರೆ.