Sunday, April 14, 2024

ಏಷ್ಯನ್ ಗೇಮ್ಸ್‌ಗೆ ಡಾ. ವರ್ಷಾ

ಜಕಾರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕದ ವೈದ್ಯರೊಬ್ಬರು ದೇಶವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ

ಮೂರನೇ ವರ್ಷದಲ್ಲಿ ಕಾಲಿಗೆ ಸ್ಕೇಟಿಂಗ್ ಶೂ ಕಟ್ಟಿಕೊಂಡ ಆ ಮಗು ಬೆಳೆದು ದೊಡ್ಡವಳಾಗಿ ವೈದ್ಯಕೀಯ ವಿ‘ಭಾಗದಲ್ಲಿ ಎಂಡಿ ಆದರೂ ತನ್ನ ಸಾಹಸ ಹಾದಿಯನ್ನು ಬಿಡಲಿಲ್ಲ. ಪರಿಣಾಮ ಮೂವತ್ತನೇ ವರ್ಷದಲ್ಲಿ ಆಕೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸುವ ‘ಭಾಗ್ಯ. ಅದೂ ಡಾ. ವರ್ಷಾ ಎಸ್. ಪುರಾಣಿಕ್ ಆಗಿ. ಈ ಬಾರಿಯ ಏಷ್ಯನ್ ಕ್ರೀಡಾಕೂಟದ ಸ್ಕೇಟಿಂಗ್ ವಿಭಾಗದಲ್ಲಿ ಡಾಕ್ಟರೊಬ್ಬರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದೇ ನಮ್ಮೆಲ್ಲರ ಹೆಮ್ಮೆ.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ವರ್ಷಾ ಮೈಸೂರಿನ ತಾರಾ ಹಾಗೂ ಆರ್. ಶ್ರೀರಾಮಕೃಷ್ಣ ಅವರ ಮುದ್ದಿನ ಮಗಳು. ಮೈಕ್ರೋ ಬಯಾಲಜಿಯಲ್ಲಿ ಎಂಡಿ ಪದವಿ ಗಳಿಸಿರುವ ವರ್ಷಾ ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ಉದ್ಯೋಗಿ. ರೋಲರ್ ಸ್ಕೇಟಿಂಗ್‌ನಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ, ಹಲವು ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಬೆಳೆಸಿದ ಕೆ. ಶ್ರೀಕಾಂತ್ ರಾವ್ ಅವರಲ್ಲಿ ವರ್ಷಾ ತರಬೇತಿ ಪಡೆಯುತ್ತಿದ್ದಾರೆ. ೨೧ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ  ಕರ್ನಾಟಕವನ್ನು ಪ್ರತಿನಿಧಿಸಿರುವ ವರ್ಷಾ ೪೪ ಚಿನ್ನ, ೧೭ ಬೆಳ್ಳಿ ಹಾಗೂ ೬ ಕಂಚಿನ ಪದಕ ಗೆದ್ದು ಸಾಧನೆ ಮಾಡಿರುತ್ತಾರೆ. ೯ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದ ಕೀರ್ತಿ ವರ್ಷಾ ಅವರಿಗೆ ಸಲ್ಲುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷಾ ಹಲವು ಬಾರಿ ಭಾರತವನ್ನು ಪ್ರತಿನಿಧಿಸಿರುತ್ತಾರೆ. ೩ ಬಾರಿ ವಿಶ್ವ ಚಾಂಪಿಯನ್‌ಷಿಪ್, ೫ ಬಾರಿ ಏಷ್ಯನ್ ಚಾಂಪಿಯನ್‌ಷಿಪ್, ೨ ಏಷ್ಯನ್ ಗೇಮ್ಸ್ (ಬೇಸಿಗೆ ಹಾಗೂ ಚಳಿಗಾಲ), ಹಾಗೂ ಒಂದು ಬಾರಿ ವಿಶ್ವ ಗೇಮ್ಸ್‌ನಲ್ಲಿ ಭಾಗಿಯಾಗಿದ್ದಾರೆ. ೨೦೦೧ರಲ್ಲಿ ತೈವಾನ್‌ನಲ್ಲಿ ನಡೆದ ೧೦ನೇ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವರ್ಷಾ, ಐಸ್ ಸ್ಕೇಟಿಂಗ್‌ನಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ೪ ಚಿನ್ನ ಹಾಗೂ ೧ ಕಂಚಿನ ಪದಕ ಗೆದ್ದಿದ್ದಾರೆ. ವರ್ಷಾ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ೨೦೧೨ರ ಏಕಲವ್ಯ ಪ್ರಶಸಿ ಯನ್ನು ನೀಡಿ ಗೌರವಿಸಿದೆ.
ಜಕಾರ್ಥದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುತ್ತಿರುವ ವರ್ಷಾ ಅವರೊಂದಿಗೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ.
ಕೆಲಸದ ನಡುವೆ ಸ್ಕೇಟಿಂಗ್ ಜೀವಂತವಾಗಿರಿಸಿಕೊಂಡಿದ್ದು ಹೇಗೆ?
ಇದಕ್ಕೆ ನನ್ನ ಹೆತ್ತವರು ಹಾಗೂ ಗುರುಗಳು ಪ್ರಮುಖ ಕಾರಣ. ಸ್ಕೇಟಿಂಗ್ ರಿಂಕ್‌ನಲ್ಲಿ ನಿರಂತರ ಅಭ್ಯಾಸ ನನ್ನನ್ನು ಇಲ್ಲಿಯವರೆಗೆ ಕರೆದು ತಂದಿದೆ. ನಿರಂತರ ಓದು ಹಾಗೂ ಅಭ್ಯಾಸ ಇವನ್ನು ಬಿಟ್ಟರೆ ಸಾಮಾಜಿಕ ಬದುಕಿನ ಕಡೆಗೆ ಗಮನ ಹರಿಸಿಲ್ಲ. ಇತರರಂತೆ ಸಿನಿಮಾ, ಪ್ರವಾಸ ಅಥವಾ ಇತರ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಮೂರನೇ ವರ್ಷದಲ್ಲಿ ಕಾಲಿಗೆ ಸ್ಕೇಟಿಂಗ್ ಶೂ ಕಟ್ಟಿಕೊಂದ ನಾನು ಈಗಲೂ ಮುಂದುವರಿದಿದ್ದೇನೆ. ಅದೇ ನನ್ನ ಬದುಕಿನ ಇನ್ನೊಂದು ಭಾಗವಾಗಿಬಿಟ್ಟಿದೆ. ಏಷ್ಯನ್ ಗೇಮ್ಸ್‌ಗಾಗಿ ೨೦೧೪ರಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಗುರುಗಳಾದ ಶ್ರೀಕಾಂತ್ ರಾವ್ ಅವರ ಶಿಸ್ತು ನನ್ನನ್ನು ಚಾಂಪಿಯನ್ ಸ್ಕೇಟರ್ ಆಗಿ ಮಾಡಿದೆ.
ಸ್ಕೇಟಿಂಗ್‌ನಲ್ಲಿ ಪ್ರಮಖ ಅಂಶ ಯಾವುದು?
ಏಕಾಗ್ರತೆ ಸ್ಕೇಟಿಂಗ್‌ಗೆ ಅಗತ್ಯವಿರುವ ಪ್ರಮುಖ ಅಂಶ. ದೇಹದ ಬ್ಯಾಲೆನ್ಸ್ ಕೂಡ ಪ್ರಮುಖವಾಗಿ ಬೇಕಾಗುತ್ತದೆ. ಸ್ಕೇಟಿಂಗ್‌ನಲ್ಲಿ  ಶಾರ್ಟ್ ಹಾಗೂ ಲಾಂಗ್ ಡಿಸ್ಟೆನ್ಸ್ ಎರಡೂ ಇರುತ್ತದೆ. ನಮ್ಮ ದೈಹಿಕ ಸಾಮರ್ಥ್ಯ ನೋಡಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ಬಾರಿ ಪದಕ ಗೆಲ್ಲುವ ಆತ್ಮವಿಶ್ವಾಸ ಇದೆಯೇ?
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವ ೯ ಮಂದಿ ಸ್ಪರ್ಧಿಗಳು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನನಗೂ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ. ಆ ದಿನದ ಸ್ಪರ್‘ೆ ಮುಖ್ಯವಾಗಿರುತ್ತದೆ. ನಿರಂತರ ಅ‘್ಯಾಸ ಉಪಯೋಗಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಜತೆಯಲ್ಲಿ ಹೆತ್ತವರ ಆಶೀರ್ವಾದವಿದೆ. ಗುರುಗಳ ಹಾರೈಕೆ ಇದೆ. ಉತ್ತಮ ಗುಣಮಟ್ಟದ, ನನಗಾಗಿಯೇ ಸಿದ್ಧಗೊಳಿಸಿದ ಶೂ, ಫ್ರೇಮ್ ಹಾಗೂ ಹುಟ್ಟುಹಬ್ಬಕ್ಕೆ ತಾಯಿ ಸ್ಪೇನ್‌ನಿಂದ ತರಿಸಿದ ಹೆಲ್ಮೆಟ್ ಇದೆ. ಇವೆಲ್ಲ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನನ್ನೆದುರು ಗುರಿ ಇದೆ, ತಲುಪಬೇಕು. ಬೇರೆಲ್ಲ ಗೌಣ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ನಿಮ್ಮಲ್ಲಿ ಸ್ಫೂರ್ತಿ ತುಂಬಿದೆಯೇ?
ನಿಜವಾಗಿಯೂ ಹೌದು. ಸೈನಾ ನೆಹ್ವಾಲ್, ಪಿವಿ ಸಿಂಧೂ, ದೀಪಾ ಕರ್ಮಾಕರ್, ಹಿಮಾ ದಾಸ್ ಅವರ ಸಾಧನೆ ಯಾರಲ್ಲೂ ಸ್ಫೂರ್ತಿ ತರುವಂಥದ್ದು. ಹಿಮಾ ದಾಸ್ ಗ್ರಾಮೀಣ ಪ್ರದೇಶದಿಂದ ಬಂದು ಜಾಗತಿಕ ಮಟ್ಟದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದವರು. ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿರುತ್ತದೆ. ಅವರ ಬಗ್ಗೆ ಹುಡುಗರಿಗಿಂತ ಹೆಚ್ಚಿನ ಕಾಳಜಿ ವಹಿಸಬೇಕು. ನಾನು ಹುಡುಗರೊಂದಿಗೆ ಅಭ್ಯಾಸ ನಡೆಸುತ್ತೇನೆ. ಚೀನಾ ಹಾಗೂ ಕೊರಿಯಾದ ಸ್ಪರ್ಧಿಗಳು ಅತ್ಯಂತ ವೇಗಿಯಾಗಿರುತ್ತಾರೆ. ಅಲ್ಲಿನ ಮಹಿಳಾ ಸ್ಪರ್ಧಿಗಳು ಭಾರತದ ಪುರುಷರಿಗೆ ಸಮಾನ ಎಂಬಂತೆ ವೇಗದಲ್ಲಿ ಮುಂದಾಗಿರುತ್ತಾರೆ.  ಈ ಕಾರಣಕ್ಕಾಗಿ ಪುರುಷರೊಂದಿಗೆ ಅಭ್ಯಾಸ ನಡೆಸುತ್ತೇನೆ. ನನ್ನ ತಾಯಿ ಎಲ್ಲಿಲ್ಲದ ಪ್ರೋತ್ಸಾಹ ನೀಡುತ್ತಾರೆ. ಹೆಣ್ಣು ಮಗಳಾಗಿ  ಈ ರೀತಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಸಹಿಸದವರು ಟೀಕೆಯ
ಮಾತುಗಳನ್ನಾಡುತ್ತಾರೆ. ಅದಕ್ಕೆ ನಾನು ಬೆಲೆ ಕೊಡುವುದಿಲ್ಲ. ಮದುವೆ, ಮಕ್ಕಳು ಬಿಟ್ಟರೆ ಬದುಕಿನ ಇತರ ಸಾಧನೆಯ ಬಗ್ಗೆ ಅವರಿಗೆ ಅರಿವು ಕಡಿಮೆ ಇರುತ್ತದೆ. ಈ ಕಾರಣಕ್ಕಾಗಿ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಸದ್ಯದ ಗುರಿ.

Related Articles