Sunday, May 26, 2024

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯೇ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್

ಬೆಂಗಳೂರು: ಕ್ರಿಕೆಟ್ ಜಗತ್ತು ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಕಂಡಿದೆ. ದಿಗ್ಗರೆನಿಸಿಕೊಂಡವರು ಕ್ರಿಕೆಟ್ ಕ್ಷಿತಿಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 10 ವರ್ಷಗಳ ಹಿಂದೆ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳು ಯಾರು ಎಂಬ ಪ್ರಶ್ನೆ ಕೇಳಿದರೆ ಸಿಗುತ್ತಿದ್ದ ಉತ್ತರ ವೆಸ್ಟ್ ಇಂಡೀಸ್‌ನ ಲೆಜೆಂಡ್ ಸರ್ ವಿವಿಯನ್ ರಿಚರ್ಡ್ಸ್, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್.
ಆದರೆ ಈಗ ಕಾಲ ಬದಲಾಗಿದೆ. ಸಾರ್ವಕಾಲಿಕ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್ ಸ್ಥಾನವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಿಸಿಕೊಂಡಿದ್ದಾರೆ.

PC: Twitter/BCCI

ಸಾಧನೆಯಲ್ಲಿ ರಿಚರ್ಡ್ಸ್, ಸಚಿನ್, ಪಾಂಟಿಂಗ್ ಏರಿದ ಎತ್ತರಕ್ಕೆ ವಿರಾಟ್ ಇನ್ನೂ ಏರದಿದ್ದರೂ, ಆ ಹಾದಿಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವುದಂತೂ ಸತ್ಯ.

207 ಏಕದಿನ ಪಂದ್ಯಗಳನ್ನಾಡುವ ಹೊತ್ತಿಗೆ 57.32ರ ಅಮೋಘ ಸರಾಸರಿ ಹೊಂದಿರುವುದು ಸುಲಭದ ಮಾತಲ್ಲ. 9 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿರುವ ವಿರಾಟ್ ಕೊಹ್ಲಿ 34 ಶತಕಗಳನ್ನು ಬಾರಿಸಿದ್ದು, ಶತಕ ಗಳಿಕೆಯಲ್ಲಿ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಮೀರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ವಿಶ್ವದಾಖಲೆಯನ್ನು ಮುರಿಯಲು ಕೊಹ್ಲಿಗೆ ಬೇಕಿರುವುದಿನ್ನು 16 ಶತಕಗಳಷ್ಟೇ. ಈಗ ಮುನ್ನುಗ್ಗುತ್ತಿರುವ ವೇಗವನ್ನು ನೋಡಿದರೆ, 29 ವರ್ಷದ ಕೊಹ್ಲಿ ಮುಂದಿನ 4 ವರ್ಷಗಳಲ್ಲಿ ಕ್ರಿಕೆಟ್ ದೇವರ ದಾಖಲೆಯನ್ನು ಪುಡಿಗಟ್ಟುವುದು ಖಚಿತ.

ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್ ಎಂದು ಕಳೆದ ವಾರವಷ್ಟೇ ಪಾಕಿಸ್ತಾನದ ದಿಗ್ಗಜ ಆಟಗಾರ ಜಾವೆದ್ ಮಿಯಾಂದಾದ್ ಹೇಳಿದ್ದರು. ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ರನ್ ಚೇಸರ್ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸೆರ್ ಹುಸೇನ್ ಇತ್ತೀಚೆಗಷ್ಟೇ ಹೇಳಿದ್ದಾರೆ.
ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಏಕದಿನ ಕ್ರಿಕೆಟ್‌ನ ಮೊಟ್ಟ ಮೊದ ಸೂಪರ್‌ಸ್ಟಾರ್. ವಿಧ್ವಂಸಕ ಆಟಕ್ಕೆ ಹೆಸರಾಗಿದ್ದ ರಿಚರ್ಡ್ಸ್ ಬೌಲರ್‌ಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದರು. 200 ರನ್‌ಗಳೇ ಗೆಲುವಿನ ಮೊತ್ತ ಎಂಬಂತಿದ್ದ 80ರ ದಶಕದ ಕಾಲಘಟ್ಟದಲ್ಲೇ ವಿವಿಯನ್ ರಿಚರ್ಡ್ಸ್ ಇಂಗ್ಲೆಂಡ್ ವಿರುದ್ಧ 189 ರನ್ ಸಿಡಿಸಿ ಅಬ್ಬರಿಸಿದ್ದರು. ಆಡಿರುವ 187 ಏಕದಿನ ಪಂದ್ಯಗಳಲ್ಲಿ 90.20ರ ಸ್ಟ್ರೈಕ್ ರೇಟ್ ಹೊಂದಿದ್ದ ವಿಸ್ಫೋಟಕ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್.

ರಿಚರ್ಡ್ಸ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಸಿಡಿಲ ಮರಿ ಭಾರತದ ಸಚಿನ್ ತೆಂಡೂಲ್ಕರ್. 90ರ ದಶಕದಲ್ಲಿ ಭಾರತದ ಏಕಾಂಗಿ ಮ್ಯಾಚ್ ವಿನ್ನರ್ ಆಗಿದ್ದ ಸಚಿನ್, ಏಕದಿನ ಕ್ರಿಕೆಟ್‌ನಲ್ಲಿ ಬಹುತೇಕ ಎಲ್ಲಾ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ವಿಶ್ವದಾಖಲೆಯ 463 ಪಂದ್ಯಗಳು, ವಿಶ್ವದಾಖಲೆಯ 49 ಶತಕಗಳು, ವಿಶ್ವದಾಖಲೆಯ 96 ಅರ್ಧಶತಕಗಳು ಸಚಿನ್ ಅವರ ಬತ್ತಳಿಕೆಯಲ್ಲಿವೆ.
2000ದ ನಂತರ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸೂಪರ್‌ಸ್ಟಾರ್ ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದಾರೆ. ಆದರೆ ಇವರೆಲ್ಲರನ್ನೂ ಮೀರಿಸುವಂತೆ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ.

ಕನಿಷ್ಠ 100 ಏಕದಿನ ಪಂದ್ಯಗಳನ್ನಾಡಿದ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು 57ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಕೊಹ್ಲಿ ಪ್ರತಿ 5.8 ಇನ್ನಿಂಗ್ಸ್‌ಗಳಿಗೆ ಒಂದರಂತೆ ಒಂದು ಶತಕ ಬಾರಿಸಿದ್ದರೆ, ಸಮಕಾಲೀನ ಕ್ರಿಕೆಟ್‌ನಲ್ಲಿ ಅವರ ಪ್ರತಿಸ್ಪರ್ಧಿಯಾಗಿರುವ ಎಬಿ ಡಿವಿಲಿಯರ್ಸ್ ಪ್ರತಿ 8.6 ಇನ್ನಿಂಗ್ಸ್‌ಗಳಿಗೆ ಒಂದರಂತೆ ಒಟ್ಟು 227 ಪಂದ್ಯಗಳಲ್ಲಿ 25 ಶತಕಗಳನ್ನು ದಾಖಲಿಸಿದ್ದಾರೆ.

34 ಶತಕಗಳಲ್ಲಿ 20 ಶತಕಗಳನ್ನು ವಿರಾಟ್ ಕೊಹ್ಲಿ ರನ್ ಚೇಸಿಂಗ್ ವೇಳೆ ಬಾರಿಸಿದ್ದಾರೆ. ಅಂದರೆ ಒತ್ತಡದ ಸಂದರ್ಭಗಳಲ್ಲಿ ಆಡುವುದನ್ನು ವಿರಾಟ್ ಇಷ್ಟ ಪಡುತ್ತಾರೆ. ಈ 20 ಶತಕಗಳಲ್ಲಿ 18 ಬಾರಿ ಭಾರತ ಗೆದ್ದಿದೆ. ವಿರಾಟ್ ಬಾರಿಸಿದ ಒಟ್ಟು 34 ಶತಕಗಳಲ್ಲಿ 29 ಬಾರಿ ಭಾರತ ಗೆದ್ದಿದೆ.

29 ವರ್ಷದ ವಿರಾಟ್ ಕೊಹ್ಲಿ ಅವರ ಈಗಿನ ಫಿಟ್‌ನೆಸ್, ಅವರ ಉತ್ಸಾಹವನ್ನುನೋಡಿದರೆ, ಇನ್ನೂ ಕನಿಷ್ಠ 7ರಿಂದ 8 ವರ್ಷಗಳ ಕಾಲ ಅವರು ಆಡುವುದು ಖಚಿತ. ಅಷ್ಟರಲ್ಲಿ ವಿಶ್ವದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರ ಮತ್ತಷ್ಟು ದಾಖಲೆಗಳು ಪತನಗೊಂಡು, ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ವಿರಾಟ್ ಕೊಹ್ಲಿ ಬೆಳೆದು ನಿಲ್ಲಲಿದ್ದಾರೆ.

Related Articles