ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ : 400ರ ಕ್ಲಬ್‌ಗೆ ಎಂ.ಎಸ್ ಧೋನಿ

0
296
PC: BCCI
ಬೆಂಗಳೂರು: ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
PC: BCCI
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ನಡೆದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದರು. ಫಾಫ್ ಡುಪ್ಲೆಸಿಸ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿರುವ ಏಡನ್ ಮರ್ಕ್ರಾಮ್ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಧೋನಿ ಈ ದಾಖಲೆ ಬರೆದರು. ಅಲ್ಲದೆ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ಬಲಿ ಪಡೆದ ವಿಶ್ವದ 4ನೇ ವಿಕೆಟ್ ಕೀಪರ್ ಎಂಬ ಹಿರಿಮೆಯನ್ನು ಮಾಹಿ ತಮ್ಮದಾಗಿಸಿಕೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಧೋನಿ 295 ಕ್ಯಾಚ್‌ಗಳನ್ನು ಪಡೆದಿದ್ದರೆ, 106 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.
315ನೇ ಏಕದಿನ ಪಂದ್ಯದಲ್ಲಿ 400ರ ಗಡಿ ದಾಟಿದ ಧೋನಿ ಭಾರತ ಕಂಡ ಯಶಸ್ವಿ ನಾಯಕನಷ್ಟೇ ಅಲ್ಲದೆ, ಯಶಸ್ವಿ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಧೋನಿ ಅವರ ನಂತರದ ಸ್ಥಾನದಲ್ಲಿರುವ ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ 140 ಪಂದ್ಯಗಳಲ್ಲಿ 154 ಬಲಿ ಪಡೆದಿದ್ದರೆ, ಮತ್ತೊಬ್ಬ ಮಾಜಿ ವಿಕೆಚ್ ಕೀಪರ್ ಕಿರಣ್ ಮೋರೆ 94 ಪಂದ್ಯಗಳಲ್ಲಿ 90 ಬಲಿ ಪಡೆದು ಭಾರತ ಪರ 3ನೇ ಸ್ಥಾನದಲ್ಲಿದ್ದಾರೆ.

ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್

400ಕ್ಕೂ ಹೆಚ್ಚು ಬಲಿ ಪಡೆದ ವಿಕೆಟ್‌ಕೀಪರ್‌ಗಳು

ವಿಕೆಟ್ ಕೀಪರ್         ಬಲಿ         ರಾಷ್ಟ್ರ         ಪಂದ್ಯ
ಕುಮಾರ ಸಂಗಕ್ಕಾರ   482      ಶ್ರೀಲಂಕಾ      404
ಆ್ಯಡಂ ಗಿಲ್‌ಕ್ರಿಸ್ಟ್      472       ಆಸ್ಟ್ರೇಲಿಯಾ   287
ಮಾರ್ಕ್ ಬೌಷರ್      424       ದಕ್ಷಿಣ ಆಫ್ರಿಕಾ  295
ಎಂ.ಎಸ್ ಧೋನಿ      401       ಭಾರತ         315