ಇತಿಹಾಸದ ಬರೆದ ದಿವ್ಯಾಂಗ ಬಿಲ್ಗಾರರು

0
356
 
ಬೆಂಗಳೂರು:ಚೆಕ್‌ಗಣರಾಜ್ಯದ ನೋವ್ ಮೆಸ್ಟ್ ನಾಡ್ ಮೆಟುಜಿಯಲ್ಲಿ ನಡೆದ ಯೂರೋಪಿಯನ್ ಪ್ಯಾರಾ ಆರ್ಚರಿ ಗ್ರೂಪ್ ೨ ಹಂತದಲ್ಲಿ ಭಾರತದ ದಿವ್ಯಾಂಗ ಬಿಲ್ಗಾರರು ಅಗ್ರ ಸ್ಥಾನ ಪಡೆದು ಇದೇ ಮೊದಲ ಬಾರಿಗೆ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದುತಂದಿದ್ದಾರೆ. ರಾಕೇಶ್ ಕುಮಾರ್, ಶ್ಯಾಮ್ ಸುಂದರ್ ಸ್ವಾಮಿ ಹಾಗೂ ತಾರೀಫ್  ಇತಿಹಾಸದ ಬರೆದ  ಬಿಲ್ಗಾರರು.
ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಇರಾನ್‌ಗೆ ಬಿಟ್ಟುಕೊಟ್ಟ ಭಾರತದ ಕಂಪೌಂಡ್ ಬಿಲ್ಗಾರರು ಫೈನಲ್‌ನಲ್ಲಿ ರೋಮೇನಿಯಾ ವಿರುದ್ಧ ೨೨೪-೨೦೭ ಅಂತರದಲ್ಲಿ ಜಯ ಗಳಿಸಿ ಚಿನ್ನ ಗೆದ್ದುಕೊಂಡರು. ಭಾರತದ ಈ ಸಾಧನೆ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಹಾಗೂ ಎರಡು ವರ್ಷಗಳಲ್ಲಿ ನಡೆಯಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಮೊದಲ ಸುತ್ತಿನಲ್ಲಿ ಭಾರತ ತಂಡ ೫೪-೫೫ ಅಂತರದಲ್ಲಿ ಒಂದು ಅಂಕದಿಂದ ಹಿಂದೆ ಬಿದ್ದಿತ್ತು. ಆದರೆ ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿದ ಭಾರತ ಐದು ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ನಂತರ ಮೂರನೇ ಸುತ್ತಿನಲ್ಲೂ ಆರು ಅಂಕಗಳ ಮೇಲುಗೈ ಸಾಧಿಸಿತು. ರಾಕೇಶ್ ಅಪಘಾತಕ್ಕೀಡಾಗಿ ಸೊಂಟದ ಕೆಳಭಾಗದಲ್ಲಿ ವೈಕಲ್ಯ ಹೊಂದಿದ್ದರು. ಶ್ಯಾಮ್‌ಸುಂದರ್ ಅವರ ಕೈ ವೈಕಲ್ಯಹೊಂದಿರುವುದರಿಂದ ಹಲ್ಲಿನಲ್ಲಿ ಕಚ್ಚಿ ಗುರಿ ಇಡುತ್ತಿದ್ದರು. ತಾರೀಫ್  ಕಾಲಿನಲ್ಲಿ ವೈಕಲ್ಯ ಹೊಂದಿದ್ದಾರೆ.
ಮೊದಲ ಸುತ್ತಿನಲ್ಲಿ ಬೈ ಹೊಂದಿದ್ದ ಮೂವರು ಬಿಲ್ಗಾರರು ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್ ವಿರುದ್ಧ ೨೨೪-೨೧೪ ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಫ್ರಾನ್ಸ್ ವಿರುದ್ಧದ ಸೆಮಿಫೈ ನಲ್‌ನಲ್ಲಿ ೨೨೧ ಅಂಕ ಗಳಿಸಿ ಸಮಬಲ ಸಾಧಿಸಿದಾಗ ಟೈಬ್ರೇಕರ್ ಮೂಲಕ ೨೯-೨೮ ಅಂಕಗಳೊಂದಿಗೆ ಜಯ ಗಳಿಸಿ  ಫೈನಲ್ ಪ್ರವೇಶಿಸಿದ್ದರು.