ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೆಮಿಫೈನಲ್‌ನಲ್ಲಿ ಸೋತ ಸಿಂಧೂ, ಚೊಚ್ಚಲ ಪ್ರಶಸ್ತಿ ಕನಸು ಭಗ್ನ

0
356
PC: Twitter/Yonex All England

ಬರ್ಮಿಂಗ್‌ಹ್ಯಾಮ್: ಭಾರತದ ಹೆಮ್ಮೆಯ ಶಟ್ಲರ್ ಪಿ.ವಿ ಸಿಂಧೂ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ.

PC: Twitter/Yonex All England

ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ನ 4ರ ಘಟ್ಟದ ಪಂದ್ಯದಲ್ಲಿ ವಿಶ್ವದ 4ನೇ ರ್ಯಾಂಕ್‌ನ ಆಟಗಾರ್ತಿ ಸಿಂಧೂ, 2ನೇ ರ್ಯಾಂಕ್‌ನ ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ 21-19, 19-21, 18-21ರ ರೋಚಕ ಹೋರಾಟದಲ್ಲಿ ಸೋತು ವೀರೋಚಿತ ಸೋಲು ಕಂಡರು. ಇದರೊಂದಿಗೆ ಆಲ್ ಇಂಗ್ಲೆಂಡ್ ಅಂಗಣದಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಪಿ.ವಿ ಸಿಂಧೂ ಅವರ ಕನಸು ಭಗ್ನಗೊಂಡಿತು. 2016ರ ರಿಯೊ ಒಲಿಂಪಿಕ್ಸ್ ಹಾಗೂ 2017ರ ಗ್ಲಾಸ್ಗೊ ವಿಶ್ವಚಾಂಪಿಯನ್‌ಷಿಪ್‌ಗಳಲ್ಲಿ ಸಿಂಧೂ ಬೆಳ್ಳಿ ಪದಕ ಗೆದ್ದಿದ್ದರು.
ಆಲ್ ಇಂಗ್ಲೆಂಡ್‌ನಲ್ಲಿ ಫೈನಲ್ ತಲುಪುವ ಹಾದಿಯಲ್ಲಿ ಆತ್ಮವಿಶ್ವಾಸದಿಂದಲೇ ಆಟ ಆರಂಭಿಸಿದ ಸಿಂಧೂ, ಮೊದಲ ಗೇಮನ್ನು 21-19ರಲ್ಲಿ ಗೆದ್ದು ಶುಭಾರಂಭ ಮಾಡಿದರು. ಆದರೆ ನಂತರದ ಎರಡೂ ಗೇಮ್‌ಗಳಲ್ಲಿ ಪ್ರಬಲ ಪೈಪೋಟಿ ಒಡ್ಡಿದ ಹೊರತಾಗಿಯೂ ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ ಸಿಂಧೂ ಸೋಲು ಕಾಣಬೇಕಾಯಿತು.